ಉಡುಪಿ: ಆಟೊ ರಿಕ್ಷಾ ಕನಿಷ್ಠ ಮೀಟರ್ ದರ ಹಾಗೂ ರನ್ನಿಂಗ್ ಕಿ.ಮೀ. ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಸಿಐಟಿಯುಗೆ ಸೇರಿದ ಕುಂದಾಪುರ ಮತ್ತು ಬ್ರಹ್ಮಾವರ ಆಟೊ ರಿಕ್ಷಾ ಚಾಲಕ ಹಾಗೂ ಮಾಲೀಕರ ಸಂಘದಿಂದ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಸುಮಾರು 2 ವರ್ಷಗಳ ಹಿಂದೆ ಆಟೊ ರಿಕ್ಷಾ ಕನಿಷ್ಠ ಮೀಟರ್ ದರ ಮತ್ತು ರನ್ನಿಂಗ್ ಕಿ.ಮೀ. ದರ ಪರಿಷ್ಕರಿಸಲಾಗಿತ್ತು. ಇದೀಗ ಪೆಟ್ರೋಲ್, ಡೀಸೆಲ್, ಗ್ಯಾಸ್, ಇನ್ಸೂರೆನ್ಸ್ ಪ್ರೀಮಿಯಂ, ವಾಹನ ಬಿಡಿ ಭಾಗಗಳ ಬೆಲೆ ವಿಪರೀತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು. ಬಸ್ ಪ್ರಯಾಣ ದರ 2 ಬಾರಿ ಹೆಚ್ಚಿಸಲಾಗಿದ್ದು, ಆದರೆ ರಿಕ್ಷಾ ದರ ಏರಿಕೆ ಮಾಡಿಲ್ಲ ಎಂದು ಹೇಳಿದರು.
ಕುಂದಾಪುರ ಮತ್ತು ಬ್ರಹ್ಮಾವರ ಆಟೊ ರಿಕ್ಷಾ ಚಾಲಕ ಹಾಗೂ ಮಾಲೀಕರ ಸಂಘದ ಮುಖಂಡರಾದ ಲಕ್ಷ್ಮಣ್, ರಾಜು ದೇವಾಡಿಗ, ರಮೇಶ್, ನರಸಿಂಹ ಬಿ, ಸದಾಶಿವ ಪೂಜಾರಿ, ಅರವಿಂದ ದೇವಾಡಿಗ, ಸೂರ್ಯ ಪೂಜಾರಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಸೆಪ್ಟೆಂಬರ್ ತಿಂಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮತ್ತೆ ಮನವಿ ನೀಡಿದ್ದು, ಅದಕ್ಕೆ ಸ್ಪಂದಿಸದೆ ಇದ್ದ ಲ್ಲಿ ಜನವರಿ ತಿಂಗಳಲ್ಲಿ ತಾಲೂಕುವಾರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.