ಜಿಲ್ಲೆಯ ಪ್ರಗತಿಗೆ ವೇಗ ತುಂಬುವಲ್ಲಿ ‘ಉಡುಪಿ ಆಟೋ ಎಕ್ಸ್‌ಪೋ’ ಸಹಕಾರಿ: ಯಶ್ ಪಾಲ್ ಸುವರ್ಣ

ಉಡುಪಿ: ಉಡುಪಿ-ಮಣಿಪಾಲವು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅತೀ ವೇಗದಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಉಡುಪಿ ನಗರದ ಪ್ರಗತಿಗೆ ಉಡುಪಿ ಆಟೋ ಎಕ್ಸ್ ಪೋ ಮೂಲಕ ಇನ್ನಷ್ಟು ವೇಗ ದೊರಕಿದೆ. ಉಡುಪಿಯು ಜಿಲ್ಲೆಯಾಗಿ ಮಾನ್ಯತೆ ಪಡೆದು ಇಪ್ಪತ್ತೈದು ವರ್ಷಗಳಾಗಿದ್ದು ಜಿಲ್ಲೆಯ ಕೊಡುಗೆ ಮತ್ತು ಸಾಧನೆಗಳು ಬಹಳ. ಜಿಲ್ಲೆಯು ಧಾರ್ಮಿಕತೆ, ಶೈಕ್ಷಣಿಕ ಕ್ಷೇತ್ರ, ಬ್ಯಾಂಕಿಂಗ್ , ಹೋಟೆಲ್ ಉದ್ಯಮ, ಮೀನುಗಾರಿಕೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ವಿಶ್ವದ ಮನಸ್ಸನ್ನು ಗೆದ್ದಿದೆ. ಉಡುಪಿಯಲ್ಲಿ ಹೂಡಿಕೆ ಮಾಡಲು ಉದ್ಯಮಗಳು ಮುಂದೆ ಬರುತ್ತಿವೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಅವರು ಶುಕ್ರವಾರದಂದು ಜಿಲ್ಲಾ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌ ಮತ್ತು ಉಡುಪಿ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್‌ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಉಡುಪಿ ಆಟೋ ಎಕ್ಸ್‌ಪೋ-2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಜನರು ಬೇರೆ ಬೇರೆ ಭಾಗಗಳಿಗೆ ತೆರಳಿ ವಾಹನಗಳನ್ನು ಖರೀದಿಸಬೇಕಾಗುತ್ತಿತ್ತು. ಆದರೆ ಉಡುಪಿ ಆಟೋ ಎಕ್ಸ್ ಪೋ ದಿಂದಾಗಿ ಒಂದೆ ಸೂರಿನಡಿ ಎಲ್ಲಾ ಕಂಪನಿಗಳ ವಾಹನಗಳನ್ನು ಪಡೆಯುವಂತಾಗಿದ್ದು, ಈ ಕಾರ್ಯ ಅಭಿನಂದನೀಯ. ಆಟೋ ಎಕ್ಸ್ ಪೋ ಯಶಸ್ಸು ಕಂಡು ಪ್ರತಿ ವರ್ಷವೂ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌ ಕಾರ್ಯದರ್ಶಿ ಕಾಶಿನಾಥ್‌ ನಾಯಕ್‌ ವಹಿಸಿದ್ದರು.

ವೇದಿಕೆಯಲ್ಲಿ ಯುಸಿಸಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್, ಜಿಲ್ಲಾ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌ ಅಧ್ಯಕ್ಷ ಪಿ.ಶ್ರೀನಿವಾಸ್ ಪೈ, ಕ.ರಾಜ್ಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದ.ಕ ಟಯರ್ ಡೀಲರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಕಸೂರಿ ಪ್ರಭಾಕರ್ ಪೈ, ಮಣಿಪಾಲ ಆಟೋ ಕ್ಲಬ್ ನ ಸಂಸ್ಥಾಪಕರಾದ ಡಾ.ನಿಶಾಂತ್ ಭಟ್, ಡಾ ಅಫ್ಜಲ್, ಟಾಟಾ ಮೋಟರ್ಸ್ ನ ಗ್ರಾಹಕ ವ್ಯವಹಾರಗಳ ಗೌತಮ್ ಕಾಮತ್ ಉಪಸ್ಥಿತರಿದ್ದರು.

ಸ್ನೇಹಾ ಸತೀಶ್ ಭಟ್ ಪ್ರಾರ್ಥಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಡೆಂಟಾ ಕೇರ್ ನ ಡಾ.ವಿಜಯೇಂದ್ರ ವಸಂತ್ ಸ್ವಾಗತಿಸಿ, ಯುಸಿಸಿ ಕಾರ್ಯದರ್ಶಿ ಲಕ್ಷ್ಮೀಕಾಂತ್ ಬೆಸ್ಕೂರ್ ಕಾರ್ಯಕ್ರಮ ನಿರ್ವಹಿಸಿದರು.

ಬಹುಮಾನ ಗೆಲ್ಲುವ ಅವಕಾಶ

ಉಡುಪಿ ಆಟೋ ಎಕ್ಸ್‌ಪೋ-2023 ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಒಂದು ಕೂಪನ್‌ ನೀಡಲಾಗುತ್ತಿದೆ. ಕೂಪನ್‌ನ ಲಕ್ಕಿ ಡ್ರಾ ಫ‌ಲಿತಾಂಶ ಮತ್ತು ಬಹುಮಾನ ವಿತರಣೆ ಸಮಾರೋಪ ಸಮಾರಂಭದಲ್ಲಿ ನಡೆಯಲಿದೆ. ಪ್ರಥಮ 5 ಗ್ರಾಂ, ದ್ವಿತೀಯ 3 ಗ್ರಾಂ, ತೃತೀಯ 1 ಗ್ರಾಂ ಚಿನ್ನ ಗೆಲ್ಲುವ ಅವಕಾಶ.

ಎಕ್ಸ್‌ಪೋದಲ್ಲಿ 33 ವಿವಿಧ ಕಂಪೆನಿಗಳ ದ್ವಿಚಕ್ರ, ತ್ರಿಚಕ್ರ, ಕಾರು, ಜೀಪು, ಟೆಂಪೋ, ಬಸ್‌, ಲಾರಿ, ಎಲ್ಲ ಮಾದರಿಯ ಎಲೆಕ್ಟ್ರಿಕ್‌ ಮತ್ತು ಸಿಎನ್‌ಜಿ ವಾಹನಗಳ ಪ್ರದರ್ಶನ ನಡೆಯುತ್ತಿದೆ.

ಎಕ್ಸ್‌ ಪೋ ನಡೆಯುವ ಸ್ಥಳದಲ್ಲೇ ವಾಹನಗಳ ಬುಕ್ಕಿಂಗ್‌ ಮಾಡಲು ಅವಕಾಶವಿದ್ದು, ಸ್ಥಳದಲ್ಲೇ ಬುಕ್ಕಿಂಗ್‌ ಮಾಡಿದವರಿಗೆ ಕಂಪೆನಿ ವತಿಯಂದ ವಿಶೇಷ ಕೊಡುಗೆ ಇದೆ. ಬ್ಯಾಂಕ್‌ ಸಾಲ ಸೌಲಭ್ಯ ದೊರೆಯಲಿದೆ. ವಿವಿಧ ಬ್ಯಾಂಕಿಂಗ್‌, ಹಣಕಾಸು ಸಾಲ ಸೌಲಭ್ಯ ನೀಡುವ ಸಂಸ್ಥೆಗಳು ಎಕ್ಸ್‌ ಪೋದಲ್ಲಿ ಭಾಗವಹಿಸಿವೆ.

ನಾಳೆ ಸಮಾರೋಪ ಸಮಾರಂಭ

ಡಿ. 30ರಂದು ಸಂಜೆ 4ರಿಂದ ನಡೆಯಲಿರುವ ಸಮಾರೋಪದಲ್ಲಿ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ರಿಂದ ಕಲಾಮಯಂ ತಂಡದಿಂದ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ರಿಂದ 3ರ ವರೆಗೆ ಅರವಿಂದ್‌ ಮೋಟಾರ್ ಅವರಿಂದ ಮೆಕ್ಯಾನಿಕ್‌ ತರಬೇತಿ ನಡೆಯಲಿದೆ ಮತ್ತು ವಿಂಟೇಜ್‌ ಕಾರ್‌ ಆ್ಯಂಡ್‌ ಸೂಪರ್‌ ಕಾರ್‌ ಶೋ, ಬೈಕ್‌ ಶೋ, ಪ್ರಸಾದ್ ನೇತ್ರಾಲಯ ಇವರಿಂದ ನೇತ್ರ ತಪಾಸಣೆ ಮತ್ತು ಕೆ.ಎಂ.ಸಿ ಮಣಿಪಾಲ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ಜರಗಲಿದೆ.