ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಕೃತಿ ಬಿಡುಗಡೆ: ಬದುಕಿನ ಒತ್ತಡದಿಂದ ಹೊರಬರಲು ಸಾಹಿತ್ಯದ ಓದು ಅವಶ್ಯಕ: ಜ್ಯೋತಿ ಮಹಾದೇವ್

ಉಡುಪಿ: ಸಾಹಿತ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಿದೆ ಎಂದು ಲೇಖಕಿ, ಹಿಪ್ನೋ ಥೆರಪಿಸ್ಟ್ ಜ್ಯೋತಿ ಮಹಾದೇವ್  ಹೇಳಿದರು.
ಅವರು ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆದ ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಹಾಗೂ ‘ದೂರಾಗೊ ಮುನ್ನ’ ಕಥಾ ಸಂಕಲನಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ತಾನು ಕಂಡುಕೊಂಡ ವಿಚಾರಗಳನ್ನು ಇತರರಿಗೆ ಹೇಳಬೇಕು ಎನ್ನುವ ತುಡಿತ ಮಾತು ಹುಟ್ಟುವ ಮೊದಲೇ ಮಾನವನಲ್ಲಿ ಇತ್ತು, ಬರವಣಿಗೆ ಬೆಳೆದಂತೆ ಸಾಹಿತ್ಯ ಮುದ್ರಿತ ರೂಪವನ್ನು ಪಡೆದುಕೊಂಡಿತು.
21 ನೇ ಶತಮಾನದಲ್ಲಿ ಎಲ್ಲಾ‌ ಮುದ್ರಿತ ರೂಪಗಳನ್ನು ದಾಟಿ ಅಂತರ್ಜಾಲ ಸಾಹಿತ್ಯ ಬೆಳೆದು ನಿಂತಿದೆ.
ಅಂತರ್ಜಾಲ ವ್ಯಾಪಕವಾಗಿ ಬೆಳೆದಿರುವ ಇಂದಿನ ದಿನಗಳಲ್ಲಿಯೂ ವರ್ಷ ಕ್ಕೆ 5 ರಿಂದ 6 ಸಾವಿರ  ಸಾಹಿತ್ಯ ಕೃತಿ ಗಳು ಮುದ್ರಣ ಗೊಳ್ಳುತ್ತಿದೆ.
ಆದರೆ ಸಾಹಿತ್ಯ ಕೃತಿಗಳ ಮುದ್ರಣ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ಯುವ ಪೀಳಿಗೆ  ಪುಸ್ತಕಗಳನ್ನು ಓದುವ ಬದಲು ಅಂತರ್ಜಾಲ ಮಾಧ್ಯಮದ ಮೂಲಕ ಓದುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಬಂದಾಗ  ಚಂದ್ರಿಕಾ ನಾಗರಾಜ್ ರಂತಹ ಯುವ ಲೇಖಕಿಯರು ಭರವಸೆ ಮೂಡಿಸುತ್ತಿದ್ದಾರೆ.
ಯುವ ತಲೆಮಾರಿನ ಲೇಖಕರು ಹಿಂದಿನ ಸಾಹಿತ್ಯಗಳನ್ನು ಅಧ್ಯಯನ ಮಾಡುವುದರಿಂದ ತಮ್ಮ ಕೃತಿಗಳಿಗೆ ಅಗತ್ಯವಾದ , ಪರಿಣತಿ ಹಾಗೂ ಭಾವನಾ ಸಂವಹನದ ಶಕ್ತಿ ತುಂಬುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಥಬೀದಿ ಗೆಳೆಯರು, ಉಡುಪಿಯ ಅಧ್ಯಕ್ಷರಾದ ಮುರಳೀಧರ ಉಪಾಧ್ಯ ಮಾತನಾಡಿ,  ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಧ್ಯಾಪಕರಾದ ಸೋಜನ್ ಕೆ. ಜಾರ್ಜ್ , ಲೇಖಕಿ ಚಂದ್ರಿಕಾ ನಾಗರಾಜ್ ಶೆಟ್ಟಿ, ಪ್ರಕಾಶನದ ಪ್ರಕಾಶಕರಾದ ಕೆ. ನಾಗರಾಜ್ ಶೆಟ್ಟಿ, ಪ್ರೇಮ ಎನ್ ಶೆಟ್ಟಿ, ನಿಖಿತಾ ಕೃಷ್ಣ ಉಪಸ್ಥಿತರಿದ್ದರು.
ಸುದರ್ಶನ್ ಶೆಟ್ಟಿ ಸ್ವಾಗತಿಸಿದರು, ತಿಲಕ ನಾಗರಾಜ್ ನಿರೂಪಿಸಿದರು, ದಿವ್ಯ ವಂದಿಸಿದರು.