ಉಡುಪಿ: ಮೇ 23ರಂದು ಪುತ್ತೂರು ಗ್ರಾಮದ ರಾಜೀವನಗರ ಎಂಬಲ್ಲಿ ಶ್ಯಾಮ್ ಎಂಬ ವ್ಯಕ್ತಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚರಣ್, ಪುನೀತ್, ಮುಹಮ್ಮದ್ ಫರ್ವೆಝ್, ಅಭಿಜೀತ್, ಶ್ಯಾನ್ವಾಝ್ ಮತ್ತು ರತನ್ ಎಂದು ಗುರುತಿಸಲಾಗಿದೆ.
ಉಡುಪಿ ರಾಜಾಂಗಣ ಪಾರ್ಕಿಂಗ್ ಬಳಿಯ ಮಥುರ ಕಂಫರ್ಟಸ್ಸ್ ರೂಮ್ ಪಡೆದು ಅವಿತುಕುಳಿತಿದ್ದ ಚರಣ್, ಪುನೀತ್, ಮುಹಮ್ಮದ್ ಫರ್ವೆಝ್ ಹಾಗೂ ಅಭಿಜಿತ್ ನನ್ನು ಜೂನ್ 4ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚರಣ್ ನೀಡಿದ ಮಾಹಿತಿಯಂತೆ ಶ್ಯಾನ್ವಾಝ್ ಮತ್ತು ರತನ್ ಎಂಬವರನ್ನು ಆದಿಉಡುಪಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಿಗೆ ಲಾಕ್ ಡೌನ್ ನಿಯಮ ಉಲ್ಲಂಘಿಸಿ ರೂಮ್ ನೀಡಿದ ಹೊಟೇಲ್ ಮಾಲೀಕ ಮತ್ತು ಮ್ಯಾನೇಜರ್ ಮೇಲೆಯೂ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ:
ಮೇ 23ರಂದು ರಾತ್ರಿ ಶ್ಯಾಮ್ ಎಂಬವರು ತನ್ನ ಸ್ನೇಹಿತರೊಂದಿಗೆ ಪುತ್ತೂರು ಗ್ರಾಮದ ರಾಜೀವನಗರದಲ್ಲಿರುವ ಬಾವಿಕಟ್ಟೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ಹಳೆಯ ದ್ವೇಷದಿಂದ ಶ್ಯಾಮ್ ಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಈ ವಿಶೇಷ ಕಾರ್ಯಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಅಪರಾಧ ಶಾಖೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ವೈಲೆಟ್ ಫೇಮಿನಾ, ಎಎಸೈ ವಿಜಯ್, ಸಿಬ್ಬಂದಿ ಜೀವನ್, ರಾಜೇಶ್, ಮನೋಹರ್, ಚೇತನ್, ರಿಯಾಝ್ ಮತ್ತು ವಿಶ್ವನಾಥ ಭಾಗವಹಿಸಿದ್ದರು.