ಋಷಿಮುನಿಗಳು ವಿಜ್ಞಾನ-ವೇದಾಂತ ಬಲ್ಲ ಶ್ರೇಷ್ಠರು: ಅದಮಾರು ಶ್ರೀ

ಉಡುಪಿ: ಗ್ರಹಣವನ್ನು ಬರೀ ಕಣ್ಣಿನಲ್ಲಿ ನೋಡಬಾರದೆಂದು ಋಷಿಮುನಿಗಳು ಅಂದೇ ಹೇಳಿದ್ದರು. ಆದರೆ ವಿಜ್ಞಾನಿಗಳು ಗ್ರಹಣ ನೋಡಿ ಕಣ್ಣು ಹಾಳಾದ ನಂತರ ಬರೀ ಕಣ್ಣಲ್ಲಿ ಗ್ರಹಣ ನೋಡಬಾರದು ಎಂದು ತೀರ್ಮಾನಿಸುತ್ತಾರೆ. ಹಾಗಾಗಿ ನಮ್ಮ ವಿಜ್ಞಾನಿಗಳು ಅರ್ಧಂಬರ್ಧ ಜ್ಞಾನಿಗಳಾಗಿದ್ದು, ಅವರಲ್ಲಿ ಪರಿಪೂರ್ಣತೆ ಇಲ್ಲ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರವಿಭಾಗ, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಕಾಲೇಜಿನ ಮಿನಿ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ ಖಗೋಳ ವಿಜ್ಞಾನ ಮತ್ತು ಗ್ರಹಣಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು
ಉದ್ಘಾಟಿಸಿ ಮಾತನಾಡಿದರು.
ನಮ್ಮ ವಿಜ್ಞಾನಿಗಳಲ್ಲಿ ಕೇವಲ ವಿಜ್ಞಾನ ಇದೆ. ಆದರೆ ಋಷಿಗಳಲ್ಲಿ ವೇದಾಂತ ಹಾಗೂ ವಿಜ್ಞಾನ ಎರಡು ಇದೆ. ಆದ್ದರಿಂದ ಕುಠೀರದೊಳಗೆ ಕುಳಿತುಕೊಂಡೇ ಕಾಣದ ಪ್ರಪಂಚವನ್ನು ಒಳಗಿನ ಕಣ್ಣುಗಳಿಂದ ನೋಡಿ ಸಮಾಜಕ್ಕೆ ಕರಾರುವಕ್ಕಾಗಿ ವಿಜ್ಞಾನದ ಕೌತುಕಗಳನ್ನು ಈ ಹಿಂದೆ ತೋರಿಸಿಕೊಟ್ಟಿದ್ದಾರೆ. ಅದು ಕೂಡ ಕೇವಲ ಬಾಯಿಯಲ್ಲಿ ಮಾತ್ರವಲ್ಲದೆ, ದಾಖಲೆ
ಸಮೇತ ಸಮಾಜದ ಮುಂದೆ ಇಟ್ಟಿದ್ದಾರೆ ಎಂದರು.
ನಮ್ಮ ಋಷಿಗಳು ಸೈನ್ಸ್‌ ಪ್ಲಸ್‌ ಸೈಂಟಿಸ್ಟ್‌ ಆಗಿದ್ದರೆ, ಈಗಿನ ವಿಜ್ಞಾನಿಗಳು ಕೇವಲ ಸೈಂಟಿಸ್ಟ್‌ಗಳಾಗಿದ್ದಾರೆ. 21ನೇ ಶತಮಾನವಲ್ಲ 70ನೇ ಶತಮಾನಕ್ಕೂ ಕಾಲಿಟ್ಟರು ಪ್ರತಿಯೊಂದು ಕೆಲಸ ಹಿಂದೆ ದೇವರಿದ್ದಾರೆಂಬ ಪ್ರಜ್ಞೆ ಬರಬೇಕು. ವಿಜ್ಞಾನಿಗಳು ಯಾವಾಗ
ಗೊತ್ತಿಲ್ಲ ಎಂದು ಕೈಚೆಲ್ಲುತ್ತಾರೆಯೋ ಆಗ ವೇದಾಂತ ಆರಂಭವಾಗುತ್ತದೆ. ಭೌತಶಾಸ್ತ್ರದ ಬಗ್ಗೆ ವಿಜ್ಞಾನಿಗಳು ಅಧ್ಯಯನದಲ್ಲಿಯೇ ಇದ್ದಾರೆ ಹೊರತು, ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆದರೆ ಋಷಿಗಳು ನೀಡಿದ ತೀರ್ಮಾನ ಯಾವತ್ತೂ ಬದಲಾಗಲ್ಲ. ಅದು ವಸ್ತುನಿಷ್ಠವಾಗಿರುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ, ಖಗೋಳ ವಿಜ್ಞಾನ ಬಹಳ ವಿಸ್ತಾರವಾದ ಕ್ಷೇತ್ರ ಜತೆಗೆ ಪ್ರಕೃತಿಯನ್ನು ಅರಿಯುವ ಕ್ಷೇತ್ರವೂ ಸಹ ಆಗಿದೆ. ಹಾಗಾಗಿ ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನ ಕೌತುಕಗಳ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಮಾಡಬೇಕು. ಗ್ರಹಣ ನೋಡುವ ಸುರಕ್ಷಿತ ವಿಧಾನಗಳನ್ನು ಅವರಿಗೆ ತಿಳಿಸಿಕೊಡಬೇಕು ಎಂದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘುವೇಂದ್ರ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ. ಆಚಾರ್ಯ ಸ್ವಾಗತಿಸಿದರು.
ವಿದ್ಯಾರ್ಥಿನಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಖಗೋಳ ವೀಕ್ಷಕರ ಸಂಘದ ಸಂಯೋಜಕ ಅತುಲ್‌ ಭಟ್‌ ವಂದಿಸಿದರು.