ಉಡುಪಿ: ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರಿಗೆ ಮಂಕುಬೂದಿ ಎರಚುತ್ತಿದ್ದ ಆರೋಪಿಯ ಬಂಧನ

ಉಡುಪಿ: ಕೊಂಕಣ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಹಣ ಸುಲಿಗೆ ಮಾಡುತ್ತಿದ್ದ ವಂಚಕನೊಬ್ಬನನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನನ್ನು ಗಣೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಈತ ಜನರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅವರಿಂದ ಹಣ ಹಾಗೂ ದಾಖಲೆ ಪತ್ರಗಳನ್ನು ಪಡೆದುಕೊಂಡು ಮಂಕುಬೂದಿ ಎರಚುತ್ತಿದ್ದನು.

ಅಕ್ಟೋಬರ್ 25 ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಒಪಿಡಿ ಬಳಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಮಥಾಯಿಸ್ ಎಂಬುವವರ ನ್ನು ಪರಿಚಯ ಮಾಡಿಕೊಂಡ ಆರೋಪಿ ಗಣೇಶ್ ನಾಯ್ಕ್ ‘ನಾನು ಕೊಂಕಣ ರೈಲ್ವೆಯಲ್ಲಿ ಟಿಸಿ ಆಗಿ ಕೆಲಸ ಮಾಡಿಕೊಂಡಿದ್ದು, ನಿಮಗೆ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ 20 ಸಾವಿರ ಹಾಗೂ ದಾಖಲೆ ಪತ್ರ ತೆಗೆದುಕೊಂಡಿದ್ದನು’.

ಹಾಗೆ ಪರ್ಕಳದ ವನಿತಾ ಎಂಬುವವರಿಂದಲೂ ಹಣ ಪಡೆದು ನಕಲಿ ನೇಮಕಾತಿ ಪತ್ರವನ್ನು ನೀಡಿ ಮೋಸ ಮಾಡಿದ್ದನು. ಈ ಬಗ್ಗೆ ಈತನ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ಪತ್ತೆಗಾಗಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ, ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು ಮತ್ತು ವಾಸಪ್ಪ ನಾಯ್ಕ, ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿದ್ದು, ಈ ತಂಡವು ಇಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿ ಗಣೇಶ್ ನಾಯ್ಕ್ ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ.ಸಿ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಉಡುಪಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಅವರ ಬಳಿ ಹಣ ಮತ್ತು ದಾಖಲಾತಿಯ್ನ ಪಡೆದುಕೊಂಡು ವಂಚಿಸಿರುವ ಹಲವಾರು ಪ್ರಕರಣಗಳು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಯನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸ್ ಇನ್ಸ್‌‌ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿಯವರು ಸಹಕರಿಸಿದ್ದಾರೆ.