ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಸರಕಾರಿ ಉದ್ಯೋಗ ಮಾಡಿಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಖದೀಮನೊಬ್ಬನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದು, ಆತನಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕಾಪು ಉಳಿಯಾರಗೋಳಿ ನಿವಾಸಿ ನಿಶಾಂತ ಎಸ್. ಕುಮಾರ್ ಯಾನೆ ನಿತಿನ್ (21) ಎಂದು ಗುರುತಿಸಲಾಗಿದೆ. ಈತ ಫೇಸ್ ಬುಕ್ನಲ್ಲಿ ಪರಿಚಯ ಮಾಡಿಕೊಂಡು ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಹಲವಾರು ಮಂದಿಯಿಂದ ಹಣ ಸುಲಿಗೆ ಮಾಡುತ್ತಿದ್ದ. ನಿಶಾಂತ್ ವರ್ತನೆಯಲ್ಲಿ ಸಂಶಯಗೊಂಡ ನಿರುದ್ಯೋಗಿಯೊಬ್ಬರು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ತನಿಖೆ ಕೈಗೆತ್ತಿಕೊಂಡ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಮತ್ತು ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 7 ಲ್ಯಾಪ್ ಟಾಪ್ ಹಾಗೂ 1 ಮೊಬೈಲ್ (ಅಂದಾಜು ಮೌಲ್ಯ ₹1.50 ಲಕ್ಷ) ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.