ಉಡುಪಿ: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಕಚೇರಿ ಮೈಸೂರು ಇದರ ಸಹಯೋಗದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳವನ್ನು ನಗರದ ಅಮೃತ್ ಗಾರ್ಡನ್ ನಲ್ಲಿ ಇಂದು ಆಯೋಜಿಸಲಾಗಿತ್ತು.
ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, 140 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಲು ಹೆಚ್ಚು ಮಹತ್ವ ನೀಡುವ ಅಗತ್ಯವಿದೆ. ಇಂತಹ ಉದ್ಯೋಗ ಮೇಳಗಳ ಆಯೋಜನೆಯಿಂದ ಯುವ ಸಮುದಾಯಕ್ಕೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ವಿದ್ಯಾರ್ಥಿಗಳು ಒಂದೊಂದೆ ಹೆಜ್ಜೆಯನ್ನು ಇಡುತ್ತಾ ತಮ್ಮ ಜೀವನದ ಗುರಿ ಸಾಧನೆ ಕಡೆಗೆ ಮುನ್ನಡೆಯಬೇಕು. ಕಲಿಕಾ, ಸಾಹಿತ್ಯ, ಕ್ರೀಡಾ, ತಾಂತ್ರಿಕ ಕೌಶಲದ ಜೊತೆಗೆ ಸಾಮಾಜಿಕ ಮೌಲ್ಯವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಇಲ್ಲದೆ ಮುನ್ನಡೆದಾಗ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ. ಉದ್ಯೋಗ ಸಿಕ್ಕಿಲ್ಲ ಎಂಬ ನಿರುತ್ಸಾಹವನ್ನು ಹೊಂದದೆ ಉದ್ಯೋಗಕ್ಕಾಗಿ ಪ್ರಯತ್ನ ಮುಂದುವರಿಸಬೇಕು. ದುರ್ಬಲ ಮನಸ್ಥಿತಿಯಿಂದ ಏನಾನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಬಲವಾದ ಮನಸ್ಸಿನಿಂದ ಯಾವುದನ್ನಾದರೂ ಸಾಧಿಸಬಹುದು. ಅಂತಹ ಮನಸ್ಥಿತಿಯನ್ನು ಎಲ್ಲರೂ ಹೊಂದಬೇಕು ಎಂದು ಕರೆನೀಡಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿದರು.ಮಾಜಿ ಶಾಸಕ ಹಾಗೂ ಗೌರವಾಧ್ಯಕ್ಷ ಕೆ. ರಘುಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ಪದ್ಮರಾಜ್ ಆರ್., ರಮೇಶ್ ಕಾಂಚನ್, ಮಹೇಶ್ ಠಾಕೂರ್, ಓಬು ಪೂಜಾರಿ, ಗಣನಾಥ ಎಕ್ಕಾರ್, ಪ್ರವೀಣ್ ಎಂ. ಪೂಜಾರಿ, ಭಾಸ್ಕರ ಸುವರ್ಣ, ಸುಧಾಕರ ಅಮೀನ್, ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
















