ಉಡುಪಿ: ಹೆತ್ತ ಮಕ್ಕಳಿಂದಲೇ ವಂಚನೆಗೊಳಗಾಗಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ವೃದ್ಧ ತಾಯಿ.!

ಉಡುಪಿ: ತನ್ನ ಮಕ್ಕಳಿಂದಲೇ ವಂಚನೆಗೊಳಗಾಗಿ ಆಸ್ತಿ ಕಳೆದುಕೊಂಡು ಬೀದಿ ಪಾಲಾಗಿರುವ ವೃದ್ಧ ತಾಯಿಯೊಬ್ಬರು‌ ನ್ಯಾಯ ಕೊಡಿಸುವಂತೆ ಕೋರಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆಹೋಗಿದ್ದಾರೆ. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ 85ರ ಹರೆಯದ ಮೋಂತಿನ್ ಡಿಸಿಲ್ವ ಅವರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರ ನಾಥ್ ಶಾನುಭಾಗ್ ಈ ಬಗ್ಗೆ ಮಾಹಿತಿ ನೀಡಿದರು. ಮೋಂತಿನ್ ಡಿಸಿಲ್ವ ತನ್ನ ಮಕ್ಕಳಿಂದಲೇ ವಂಚನೆಗೆ ಒಳಗಾದ ವೃದ್ಧೆ. 2006ರಲ್ಲಿ ಇವರ ಪತಿ ಬ್ಯಾಪ್ಟಿಸ್ಟ್ ಡಿಸಿಲ್ವ ಅವರು ನಿಧನ ಹೊಂದಿದರು. ಆ ಬಳಿಕ ಆಸ್ತಿ ಹಾಗೂ ಮನೆಯನ್ನು ಪಾಲು ಮಾಡುವಂತೆ ಐವರು ಮಕ್ಕಳು ತಾಯಿಯನ್ನು ನಿತ್ಯ ಪೀಡಿಸುತ್ತಿದ್ದರು. ಹೀಗಾಗಿ ಮೋಂತಿನ್ ಡಿಸಿಲ್ವ ತನ್ನ ಹೆಸರಿನಲ್ಲಿದ್ದ 6.25 ಎಕರೆ ಜಮೀನು ಪಾಲು ಮಾಡಲು ಒಪ್ಪಿಗೆ ಸೂಚಿಸಿದರು.

ಅದರಂತೆ 2009ರಲ್ಲಿ ಎಲ್ಲಾ ಮಕ್ಕಳು ಸೇರಿ ವಿಭಾಗ ಪತ್ರವೊಂದರ ಮೂಲಕ ವಿವಿಧ ಸರ್ವೆ ನಂಬ್ರಗಳಲ್ಲಿದ್ದ ಜಮೀನುಗಳನ್ನೆಲ್ಲಾ ವಿಂಗಡಿಸಿ ಅವರವರ ಪಾಲಿಗೆ ಬಂದ ಆಸ್ತಿಗಳನ್ನು ತಮ್ಮ ತಮ್ಮ ಹೆಸರಿಗೆ ವರ್ಗಾಯಿಸಿ ಹಕ್ಕು ಪತ್ರಗಳನ್ನು ಸಹ ಮಾಡಿಕೊಂಡರು.

ಆದರೆ ತಾಯಿಯ ಪಾಲಿಗೆ 2.25 ಎಕರೆ ಜಮೀನು ವಿಂಗಡಿಸಿದರೂ ಅದನ್ನು ಅವರ ಹೆಸರಿಗೆ ದಾಖಲು ಮಾಡಿಲ್ಲ. ಬದಲಿಗೆ ತಾಯಿ ಮೋಂತಿನ್ ಪಾಲಿಗೆ ಬಂದ ಜಮೀನುಗಳಿಗೆ ಎಲ್ಲಾ ಮಕ್ಕಳ ಜಂಟಿಯಾಗಿ ಹಕ್ಕುದಾರರೆಂದು ವಿಭಾಗ ಪತ್ರದಲ್ಲಿ ದಾಖಲಿಸಿದರು. ಆದ್ದರಿಂದ ಹಕ್ಕು ಪತ್ರದಲ್ಲಿಯೂ ಎಲ್ಲರ ಹೆಸರುಗಳು ಸೇರ್ಪಡೆಗೊಂಡವು. ಆದರೆ ಮಕ್ಕಳ ಈ ವಂಚನೆ ಮೋಂತಿನ್ ಅವರ ಗಮನಕ್ಕೆ ಬರಲೇ ಇಲ್ಲ.

2014ರಲ್ಲಿ ಮಕ್ಕಳೆಲ್ಲಾ ಸೇರಿ ತಾಯಿಯನ್ನು ನೋಡಿಕೊಳ್ಳುವ ಬಗ್ಗೆ ಚರ್ಚಿಸಿದರು. ಹಾಗೆ ತಾಯಿಯನ್ನು ಕೊನೆಯವರೆಗೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳುವ ಮಗಳ ಹೆಸರಿಗೆ ತಾಯಿಯ ಪಾಲಿಗೆ ಬಂದ ಜಾಗವನ್ನು‌ ನೀಡಲಾಗುವುದು ಎಂಬ ತೀರ್ಮಾನಕ್ಕೆ ಬಂದರು.

ಮಕ್ಕಳು ತನ್ನನ್ನು ಕಡೆಯ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಮೋಂತಿನ್ ಮಕ್ಕಳು ಹೇಳಿದ ದಾಖಲೆಗಳಿಗೆಲ್ಲಾ ಸಹಿ ಮಾಡಿದರು. ಆಗಲೂ ತಾನು ವಂಚನೆ ಒಳಗಾಗಿರುವುದು ಮೋಂತಿನ್ ಅವರಿಗೆ ತಿಳಿಯಲೇ ಇಲ್ಲ.

ಆಸ್ತಿ ಕೈ ಸೇರುತ್ತಿದ್ದಂತೆ ವರಸೆ ಬದಲಾಯಿಸಿದ ಮಗಳು ಔಷಧಕ್ಕೂ ಹಣ ನೀಡದೆ ಮೋಂತಿನ್ ಅಕ್ಷರಶಃ ಪರದಾಡುವಂತೆ ಮಾಡಿದಳು. ಆಗ ತನ್ನ ಹೆಸರಿನಲ್ಲಿ ಇರುವ ಆಸ್ತಿಯನ್ನು ಮಾರಿಯಾದರೂ ಕಡೆಯ ದಿನಗಳನ್ನು ಕಳೆಯುತ್ತೇನೆಂದು ನಿರ್ಧರಿಸಿದ ವೃದ್ಧ ಜೀವಕ್ಕೆ ತಾನು ಹೆತ್ತ ಮಕ್ಕಳೇ ಮೋಸ ಮಾಡಿದ ವಿಚಾರ ತಿಳಿಯಿತು.

ಮಕ್ಕಳ ವಂಚನೆ ತಿಳಿಯುತ್ತಿದ್ದಂತೆ ತನ್ನ ಪಾಲಿಗೆ ಬಂದಿರುವ ಆಸ್ತಿಯನ್ನು ಮರಳಿಸುವಂತೆ ಕೋರಿ ಮೋಂತಿನ್ ಅವರು ಮಂಗಳೂರಿನ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಪೊಲೀಸ್ ಠಾಣೆಗೂ ದೂರು ನೀಡಿದರು. ಅದರಂತೆ  2018ರ ಮೇ 30ರಂದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆ ಹಾಗೂ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಕರೆದ ಸಭೆಯಲ್ಲಿ ಭಾಗವಹಿಸಿದ ಮಕ್ಕಳು ತಾವು ಮಾಡಿದ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡರು.

ಅಲ್ಲದೆ ತಾಯಿಯ ಪಾಲಿಗೆ ಬಂದ ಜಮೀನುಗಳನ್ನೆಲ್ಲ ಆರು ತಿಂಗಳೊಳಗೆ ಆವರಿಗೆ ಹಿಂದಿರುಗಿಸಿ, ಆಕೆಯ ಹೆಸರಿನಲ್ಲಿಯೇ ಹಕ್ಕು ಪತ್ರ ಮಾಡಿಸುವುದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟರು. ಆದರೆ ಆರು ತಿಂಗಳು ಕಳೆದರೂ ಮಕ್ಕಳು ಮೋಂತಿನ್ ಗೆ ಆಸ್ತಿ ಮರಳಿಸಲಿಲ್ಲ. ಹಾಗಾಗಿ ಮತ್ತೆ ಅವರು 2018ರ ಡಿ. 12 ರಂದು ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು.

ತನಿಖೆ ನಡೆಸಿದ ನ್ಯಾಯ ಮಂಡಳಿಯು 2019ರ ಮಾ.5 ರಂದು ಮಕ್ಕಳೆಲ್ಲ ಸೇರಿ ತಾಯಿಗೆ ಪ್ರತಿ ತಿಂಗಳು ತಲಾ ₹ 2 ಸಾವಿರ ಕೊಡುವಂತೆ ಆದೇಶ ನೀಡಿತು. ನ್ಯಾಯ ಮಂಡಳಿ ಸ್ಪಷ್ಟ ಆದೇಶ ಹೊರಡಿಸಿ 6 ತಿಂಗಳು ಕಳೆದರೂ ಯಾವ ಮಕ್ಕಳೂ ನಿಯಮಿತವಾಗಿ ಮಾಶಾಸನ ನೀಡಲಿಲ್ಲ. ಮೋಂತಿನ್ ಪುನಃ ನ್ಯಾಯ ಮಂಡಳಿಗೆ ದೂರು ನೀಡಿದರು. 2019ರ ಅ.14 ರಂದು ನ್ಯಾಯ ಮಂಡಳಿ ಮಂಗಳೂರಿನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನ್ನ ಆದೇಶದ ಅಮಲ್ಜಾರಿಗೆ ಸೂಚಿಸಿತು. ಆದರೆ ನ್ಯಾಯ ಮಂಡಳಿಯ ಆದೇಶವನ್ನು ಜಾರಿಗೊಳಿಸಲು ಇದುವರೆಗೂ ಪೊಲೀಸ್ ಹಾಗೂ ಕಂದಾಯ ಇಲಾಖೆಗಳಿಂದ ಸಾಧ್ಯವಾಗಿಲ್ಲ.

ಈ ನಡುವೆ ಮೋಂತಿನಮ್ಮನ ಐದು ಮಕ್ಕಳಲ್ಲಿ, ಮೂವರು ನ್ಯಾಯ ಮಂಡಳಿಯ ಅಧ್ಯಕ್ಷರಾದ ಸಹಾಯಕ ಆಯುಕ್ತರಿಗೆ ಪತ್ರ ಬರೆದು ‘ತಾಯಿಗೆ ಮಾಶಾಸನ ನೀಡುವಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿಗಳಿಂದ ನೋಟಿಸುಗಳು ಬರುತ್ತಿದ್ದು, ಇವೆಲ್ಲ ನಮಗೆ ಮಾನಸಿಕವಾಗಿ ಅತೀವ ವೇದನೆ ಮತ್ತು ಕಿರಿಕಿರಿ ಉಂಟು ಮಾಡುತ್ತಿವೆ ಎಂದು ಉತ್ತರಿಸಿ ತಾವು ತಾಯಿಯ ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದು ಬರೆದುಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ನ್ಯಾಯ ಕೋರಿ ಮಂಗಳೂರಿನ ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ನೀಡಲು ಪ್ರತಿಷ್ಠಾನದ ವತಿಯಿಂದ ಮೋಂತಿನ್ ಅವರಿಗೆ ಕಾನೂನು ನೆರವು ನೀಡಲಾಗಿದೆ. ಅವರಿಗೆ ಸಂಪೂರ್ಣವಾಗಿ ನ್ಯಾಯ ಸಿಗುವವರೆಗೆ ಸಹಕಾರ ನೀಡಲು ಪ್ರತಿಷ್ಠಾನ ಬದ್ಧವಾಗಿದೆ ಎಂದು ರವೀಂದ್ರನಾಥ್ ಶಾನುಭಾಗ್ ಭರವಸೆ ನೀಡಿದರು.