ಉಡುಪಿ: ಇಂದು ಪರ್ಯಾಯ ಪಂಚ ಶತಮಾನೋತ್ಸವ; ಸಿಎಂ ಯಡಿಯೂರಪ್ಪನವರಿಂದ ‘ವಿಶ್ವಪಥ’ಕ್ಕೆ ಚಾಲನೆ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠ ವತಿಯಿಂದ ಪರ್ಯಾಯ ಪಂಚ ಶತಮಾನೋತ್ಸವ(500 ವರ್ಷ)ದ ಅಂಗವಾಗಿ ಇಂದು (ಜ.18) ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದು, ದೇವರ ದರ್ಶನಕ್ಕೆ ಭಕ್ತರಿಗಾಗಿ ನಿರ್ಮಿಸಲಾದ ನೂತನ ‘ವಿಶ್ವಪಥ’ ಸರತಿ ಸಾಲನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಅಂದು ಸಂಜೆ 5 ಗಂಟೆಗೆ ಸಿಎಂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿಶ್ವಪಥವನ್ನು ಉದ್ಘಾಟಿಸುವರು. ಸಂಜೆ 5.15ಕ್ಕೆ ದೇವರ ದರ್ಶನ ಪಡೆಯಲಿದ್ದು, ಇದೇ ಸಂದರ್ಭದಲ್ಲಿ ಸಾವಯವ ಉತ್ಪನ್ನ ಹಾಗೂ ಉಡುಪಿ ಸೀರೆಯನ್ನು ಹೊಂದಿರುವ ಉಡುಪಿ ಸಾವಯವ ಮಳಿಗೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಸಂಜೆ 5.30ಕ್ಕೆ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ನಡೆಯುವ ಸಾಧಕರಿಗೆ ಸನ್ಮಾನ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಹಿರಿಯ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಸಂಸದರಾದ ಶೋಭಾ ಕರಂದ್ಲಾಜೆ, ಬಿ.ವೈ. ರಾಘವೇಂದ್ರ, ಶಾಸಕ ಕೆ. ರಘುಪತಿ ಭಟ್ ಭಾಗವಹಿಸಲಿದ್ದಾರೆ ಎಂದರು.

ಪರ್ಯಾಯ ಪಂಚ ಶತಮಾನೋತ್ಸವದ ಪ್ರಯುಕ್ತ ಪರ್ಯಾಯ ಮೆರವಣಿಗೆಯಂತೆ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀಮನ್ಮಧ್ವಾಚಾರ್ಯರ ಹಾಗೂ ಶ್ರೀವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ಜೋಡುಕಟ್ಟೆ, ಡಯಾನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕುಪೇಟೆ ಮಾರ್ಗವಾಗಿ ರಥಬೀದಿಗೆ ಶೋಭಾಯಾತ್ರೆ ಪ್ರವೇಶಿಸಲಿದೆ. ಜನಪದ ಕಲಾ ತಂಡ, ನೃತ್ಯ ಕಲಾ ತಂಡಗಳು, ಮಲ್ಲಕಂಬ, ಲಕ್ಷ್ಮೀ ಶೋಭಾನೆ, ಶ್ರೀ ಮಠದ ಬಿರುದುಬಾವಳಿ, ಘಂಟೆ, ಜಾಗಟೆ, ಶಂಖ ನಾದನದ ವೈಭವವೂ ಇದೆ ಎಂದು ತಿಳಿಸಿದರು.

ಶ್ರೀಕೃಷ್ಣ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕರಾದ ವೈ.ಎನ್. ರಾಮಚಂದ್ರ ರಾವ್, ಸಂತೋಷ್ ಕುಮಾರ್, ಪುರುಷೋತ್ತಮ್ ಅಡ್ವೆ ಉಪಸ್ಥಿತರಿದ್ದರು.