ಉಡುಪಿ: ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದೆ, ಬೇನಾಮಿ ಹೆಸರಿನಲ್ಲಿ ಸಾಲ ಪಡೆದ ಆರೋಪಿಗಳಿಬ್ಬರು ಉಡುಪಿಯ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ 20 ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದರಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಕಿಶನ್ ಹೆಗ್ಡೆ ಅವರು ಸರಿಯಾದ ದಾಖಲೆಗಳನ್ನು ಸಲ್ಲಿಸದೆ ಕೃಷಿಕನ ಹೆಸರಿನಲ್ಲಿ ಸಾಲ ಪಡೆದುಕೊಂಡಿದ್ದು, ಅದರ ಸಬ್ಸಿಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕ್ ಗೆ ಮೋಸ ಮಾಡಿದ್ದಾರೆ. ಇವರಿಗೆ ಬ್ಯಾಂಕ್ ನ ವ್ಯವಸ್ಥಾಪಕಿ ಉಷಾ ಕೆ ಎಂಬುವವರು ಸಾಲ ಪಡೆಯಲು ಸಹಕರಿಸಿದ್ದಾರೆ ಎಂದು ದೂರಲಾಗಿದೆ.
ಸಾಲ ನೀಡುವಾಗ ಯಾವುದೇ ಸರಿಯಾದ ಕ್ರಮವನ್ನು ಅನುಸರಿಸಿಲ್ಲ. 2001ರ ಸೆಪ್ಟೆಂಬರ್ 27ರಿಂದ 2018ರ ಜನವರಿ 20ರ ವರೆಗಿನ ಅವಧಿಯಲ್ಲಿ ಆರೋಪಿಗಳಿಬ್ಬರು ಬ್ಯಾಂಕ್ ಗೆ ಸುಮಾರು ರೂಪಾಯಿ 20,67,531 ರೂ.ಗಳನ್ನು ಮೋಸ ಮಾಡಿದ್ದಾರೆ ಎಂದು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು 2020ರ ಆಗಸ್ಟ್ 23ರಂದು ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಉಡುಪಿ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸದಾಶಿವ ಕರ್ಕೇರಾ ನೀಡಿರುವ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.