ಉಡುಪಿ ಏ.3: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆ ಮೇರೆಗೆ, ಉಡುಪಿ ನಗರದಲ್ಲಿನ ತರಕಾರಿ ಮಾರುಕಟ್ಟೆಯ ಅಂಗಡಿಗಳು, ಕೋಳಿ ಮತ್ತು ಕುರಿ ಮಾಂಸದ ಅಂಗಡಿ ಮತ್ತು ದಿನಸಿ ಅಂಗಡಿಗಳಿಗೆ ಶುಕ್ರವಾರ ದಿಡೀರ್ ಭೇಟಿ ನೀಡಿದ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ಕಡಿಮೆ ತೂಕ ನೀಡುತ್ತಿದ್ದವರ ಮೇಲೆ ಎರಡು ಮೊಕದ್ದಮೆ ಹಾಗೂ ದಿನಸಿ ಅಂಗಡಿಗಳ ತಪಾಸಣೆ ಮಾಡಿ ಎಂ.ಆರ್.ಪಿ ದರದ ಬಗ್ಗೆ ಒಂದು ಮೊಕದ್ದಮೆ ದಾಖಲಿಸಿ , ಒಟ್ಟು 3 ಪ್ರಕರಣಗಳಲ್ಲಿ 8000 ರೂ ದಂಡ ವಸೂಲಿ ಮಾಡಿದ್ದಾರೆ.
ತರಕಾರಿ ಅಂಗಡಿಗಳು ತಮ್ಮ ಅಂಗಡಿಯ ಮುಂದೆ ತರಕಾರಿಗಳ ದರಪಟ್ಟಿಯನ್ನು ಪ್ರದರ್ಶಿಸಲು ಸೂಚಿಸಿದ ಅಧಿಕಾರಿಗಳು, ಎಲ್ಲಾ ವರ್ತಕರು ಗ್ರಾಹಕರಿಗೆ ಸರಿಯಾದ ತೂಕ ನೀಡುವಂತೆ ಹಾಗೂ ಅಕ್ಕಿ, ಬೇಳೆ, ಸಕ್ಕರೆ ಇತ್ಯಾದಿ ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದು, ಜಿಲ್ಲೆಯಾದ್ಯಂತ ಈ ರೀತಿಯ ತಪಾಸಣೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ತಪಾಸಣೆ ಕಾರ್ಯದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ(ತೂಕ ಮತ್ತು ಅಳತೆ) ಸಹಾಯಕ ನಿಯಂತ್ರಕ ಗಜೇಂದ್ರ ವಿ, ಉಡುಪಿಯ ನಿರೀಕ್ಷಕ ರಾಗ್ಯಾ ನಾಯಕ್ ಉಡುಪಿ ಮತ್ತು ಮೂಡಬಿದ್ರೆಯ ನಿರೀಕ್ಷಕ ಮಂಜಪ್ಪ ಬಿ.ಎಸ್. ಇವರು ಭಾಗವಹಿಸಿದ್ದರು.