ಉಡುಪಿ: ಅದಮಾರು ಪರ್ಯಾಯೋತ್ಸವಕ್ಕೆ ಭಕ್ತಾಧಿಗಳು ನೀಡುವ ಹೊರೆಕಾಣಿಕೆಗಳನ್ನು ಸಂಗ್ರಹಿಸಲು ಶ್ರೀಕೃಷ್ಣಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿರುವ ಅದಮಾರು ಪರ್ಯಾಯದ ಹೊರೆಕಾಣಿಕೆ ದಾಸ್ತಾನು ‘ಉಗ್ರಾಣ’ಕ್ಕೆ ಭಾವಿ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು.
ಅನಂತರ ಮಾತನಾಡಿದ ಸ್ವಾಮೀಜಿ, ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಒಳ್ಳೆಯ ದರ್ಶನ ಹಾಗೂ ಪ್ರಸಾದ ಸಿಕ್ಕಿದರೆ, ಅದು ಭಗವಂತನಿಗೆ ತೃಪ್ತಿಗೆ ಕೊಡುತ್ತದೆ. ದೇವರ ಪ್ರಸಾದ ತಯಾರಿಸಲು ದವಸ ಧಾನ್ಯ ಹಾಗೂ ತರಕಾರಿಗಳನ್ನು ಮೊದಲೇ ಸಂಗ್ರಹಿಸುವುದು ಉತ್ತಮ. ಈ ನಿಟ್ಟಿನಲ್ಲಿ ಉಗ್ರಾಣವನ್ನು ನಿರ್ಮಿಸಲಾಗಿದೆ ಎಂದರು.
ದೇವರ ಪ್ರಸಾದದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಹಾಗಾಗಿ ಪ್ರಸಾದ ವಿತರಣೆ ಕಾರ್ಯ ನಿರಂತರವಾಗಿ ನಡೆಯಲಿದ್ದು, ಇದರಿಂದ ಭಕ್ತರಿಗೆ ಸದಾ ಸುಖ, ನೆಮ್ಮದಿ ಲಭಿಸುತ್ತದೆ. ಈ ಉಗ್ರಾಣದ ಮೂಲಕ ವಿವಿಧ ಸಮುದಾಯದ ಸಂಘಟಿತ ಶಕ್ತಿ ಸಮಾಜಕ್ಕೆ ಉಪಯೋಗವಾಗಲಿ ಎಂದು ಹಾರೈಸಿದರು.
ಜ. 15ರಿಂದ 18ರ ವರೆಗೆ ಹೊರೆಕಾಣಿಕೆ ಸಂಗ್ರಹ ಕಾರ್ಯ ನಡೆಯಲಿದೆ. ಕರಾವಳಿಯಾದ್ಯಂತದಿಂದ ಜನರು ಹೊರಕಾಣಿಕೆ ಸಮರ್ಪಿಸಲಿದ್ದು, ತೆಂಗಿನ ಕಾಯಿ, ಬೇಳೆಕಾಳು, ತರಕಾರಿ, ಎಣ್ಣೆ ಮೊದಲಾದ ವಸ್ತುಗಳನ್ನು ಸಂಗ್ರಹಿಸಲಾಗುವುದು. ಕೃಷ್ಣ ಸೇವಾ ಬಳಗದ ಮಾರ್ಗದರ್ಶನದಂತೆ ಉಡುಪಿ ಯುವ ಬ್ರಾಹ್ಮಣ ಪರಿಷತ್ ಹಾಗೂ ದೈವಜ್ಞ ಯುವಕ ಮಂಡಲದ ಯುವಕರು ಹೊರೆಕಾಣಿಕೆ ಉಗ್ರಾಣದ ನಿರ್ವಹಣೆ ಮಾಡುವರು. 120*40 ಚದರಡಿ ವಿಸ್ತೀರ್ಣದಲ್ಲಿ ಉಗ್ರಾಣ ನಿರ್ಮಾಣ ಮಾಡಲಾಗಿದೆ ಎಂದು ಉಡುಪಿ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಿಷ್ಣುಪ್ರಸಾದ ಪಾಡಿಗಾರು ತಿಳಿಸಿದರು. ಕೃಷ್ಣ ಸೇವಾ ಸಮಿತಿಯ ದಿನೇಶ್ ಪುತ್ರನ್, ಗೋವಿಂದ ರಾಜ್, ಹೊರೆಕಾಣಿಕೆ ಸಮಿತಿಯ ದೀಪಕ್ ಶೇಟ್, ಪ್ರವೀಣ್ ಉಪಾಧ್ಯ, ರಂಜನ್ ಕಲ್ಕೂರ, ಎಂ.ಎಸ್. ವಿಷ್ಣು, ದಿವ್ಯಾ ವಿಷ್ಣುಪ್ರಸಾದ್, ಪದ್ಮಲತಾ, ಸುಮಿತ್ರ ಕೆರೆಮಠ, ಮಂಜುನಾಥ್ ಉಪಸ್ಥಿತರಿದ್ದರು.