ಉಡುಪಿ: ಒಂಭತ್ತು ತಿಂಗಳ ಹಿಂದೆ ಅಂದರೆ 2020ರ ಜುಲೈ 3ರಂದು ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಅಸ್ತಿಪಂಜರದ ಸ್ಥಿತಿಯಲ್ಲಿ ಇಂದು ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಶ್ರೀನಿವಾಸ ನಾಯ್ಕ(72) ಎಂದು ಗುರುತಿಸಲಾಗಿದೆ. ಇವರು 2020ರ ಜುಲೈ 3ರಂದು ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಹೊಳೆಯ ಸೇತುವೆ ಬಳಿ ಚಪ್ಪಲಿ ಮತ್ತು ಚೀಲ ಇಟ್ಟು ಕಾಣೆಯಾಗಿದ್ದರು. ಎಷ್ಟು ಹುಡುಕಾಟ ನಡೆಸಿದರೂ ಶ್ರೀನಿವಾಸ ಅವರು ಪತ್ತೆಯಾಗಿರಲಿಲ್ಲ.
ಅಂದು ವಿಪರೀತ ಮಳೆ ಬರುತ್ತಿದ್ದ ಕಾರಣ ಹೊಳೆಯ ಬದಿಗೆ ಹೋದವರು ಆಕಸ್ಮಿಕವಾಗಿ ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿತ್ತು.
ಇಂದು ಮೂಡುಕಲ್ಮಂಜೆ ಹೊಳೆಯ ಬದಿಯ ಮರದ ಸಮೀಪ ಮನುಷ್ಯನ ಮೂಳೆ ಪತ್ತೆಯಾಗಿತ್ತು. ಅದರಂತೆ ಶ್ರೀನಿವಾಸ ಅವರ ಪತ್ನಿ ರತ್ನ ಅವರಿಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದು, ಅದರಂತೆ ಅವರು ಸ್ಥಳಕ್ಕೆ ಆಗಮಿಸಿ ಅಸ್ತಿಪಂಜರದ ಬಳಿ ಇದ್ದ ಅಂಗಿ, ಬಿಳಿ ಬಣ್ಣದ ಲುಂಗಿ ಹಾಗೂ ಉಡಿದಾರವನ್ನು ಗಮನಿಸಿ ಇದು ಶ್ರೀನಿವಾಸ ಮೃತದೇಹವೆಂದು ಗುರುತಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.