ಉಡುಪಿ: ನಗರದ ಮಿತ್ರಪ್ರಿಯ ಆಸ್ಪತ್ರೆಯ ಬಳಿ ವಂಚಕನೊಬ್ಬ ಮಹಿಳೆಯಿಂದ ಚಿನ್ನದ ಬಳೆಗಳನ್ನು ದೋಚಿದ ಘಟನೆ ಸೋಮವಾರ ನಡೆದಿದೆ.
ಮುದರಂಗಡಿಯ ಹಲಸಿನಕಟ್ಟೆಯ ನಿವಾಸಿ 63 ವರ್ಷದ ಸರೋಜಾ ಆಭರಣ ಕಳೆದುಕೊಂಡವರು. ಇವರು ಸೋಮವಾರ ಚಿಕಿತ್ಸೆಗಾಗಿ ಉಡುಪಿಯ ಕಲ್ಪನ ಚಿತ್ರಮಂದಿರದ ಬಳಿಯ ಕ್ಲಿನಿಕ್‌ವೊಂದಕ್ಕೆ ಬಂದಿದ್ದರು.
ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಾನು ಕರ್ಣಾಟಕ ಬ್ಯಾಂಕ್ ಉದ್ಯೋಗಿ, ರಾಜೇಶ್ ರಾಮಣ್ಣ ಭಂಡಾರಿಯ ಮಗನೆಂದು ಪರಿಚಯ ಮಾಡಿಕೊಂಡ ಆತ, ಕರ್ನಾಟಕ ಬ್ಯಾಂಕ್‌ನಲ್ಲಿ ಬ್ಯಾಂಕಿನಲ್ಲಿ ಬಡವರಿಗೆ 17 ಸಾವಿರ ಹಣ ಕೊಡುತ್ತಿದ್ದಾರೆ ಎಂದು ಹೇಳಿದ್ದಾನೆ.
ವಂಚಕನ ಮಾತು ನಂಬಿದ ಸರೋಜಾ ಅವರು, ಆತನೊಂದಿಗೆ ತೆರಳಿದ್ದಾರೆ. ಆಗ ವಂಚಕ ನಿಮ್ಮ ಬಳಿ ಆಭರಣ ಇದ್ದರೆ ಬ್ಯಾಗ್ ನೊಳಗೆ ಇಟ್ಟುಕೊಳ್ಳಿ, ಆಭರಣ ನೋಡಿದರೆ ಬ್ಯಾಂಕ್ ನವರು ಹಣ ಕೊಡುವುದಿಲ್ಲವೆಂದು ಹೇಳಿದನು. ಆತನ ಮಾತು ನಂಬಿದ ಸರೋಜಾ ಅವರು, ತಮ್ಮ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ತೆಗೆದಿದ್ದಾರೆ.
ಆಗ ವಂಚಕ ನಾನೇ ಬ್ಯಾಗ್‌ನಲ್ಲಿ ಇಡುತ್ತೇನೆಂದು ಬಳೆಗಳನ್ನು ತೆಗೆದುಕೊಂಡಿದ್ದನು. ಬಳಿಕ ಮಹಿಳೆಯನ್ನು ಆಸ್ಪತ್ರೆಯ ಸಮೀಪ ಬಿಟ್ಟು ಹೋದವನು ಮರಳಿ ಬರಲಿಲ್ಲ. ಇದರಿಂದ ಅನುಮಾನಗೊಂಡ ಸರೋಜಾ ಅವರು ಬ್ಯಾಗ್ ತೆಗೆದು ಪರಿಶೀಲಿಸಿದ್ದಾರೆ. ಆಗ ವಂಚಕ ಬಳೆಗಳನ್ನು ಲಪಟಾಯಿಸಿರುವುದು ಅರಿವಿಗೆ ಬಂದಿದೆ.
ಕೂಡಲೇ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚಕ ದೋಚಿರುವ ಬಳೆಯ ಮೌಲ್ಯವು 86 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ.