ಉಡುಪಿ: ಚಿನ್ನಕ್ಕೆ ಪಾಲಿಶ್ ಮಾಡುವ ಶಾಪ್ ನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಶಾಪ್ ನ ಡ್ರಾವರ್ ನಲ್ಲಿದ್ದ ಸುಮಾರು ₹ 80 ಸಾವಿರ ಮೌಲ್ಯದ 15 ಗ್ರಾಂ. ತೂಕದ ಚಿನ್ನವನ್ನು ದೋಚಿದ ಘಟನೆ ಉಡುಪಿಯಲ್ಲಿ ಬುಧವಾರ ಮಧ್ಯರಾತ್ರಿ ಸುಮಾರಿಗೆ ನಡೆದಿದೆ.
ಉಡುಪಿಯ ತೆಂಕಪೇಟೆಯ ರಾಮಭವನ ಹೋಟೆಲ್ ಎದುರಿನ ಮನೀಶ್ ಚಿನ್ನದ ಪಾಲಿಶ್ ಶಾಪ್ ನಲ್ಲಿ ಈ ಘಟನೆ ಸಂಭವಿಸಿದೆ. ಆಭರಣಗಳಿಗೆ ಪಾಲಿಶ್ ಮಾಡಲು ತಂದಿಟ್ಟಿದ್ದ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದಾರೆ.
ಶಾಪ್ ನ ಮಾಲೀಕ ಶಿವಾನಂದ ಆಚಾರ್ಯ ಅವರು ಕೆಲಸ ಮುಗಿದ ಬಳಿಕ ಉಳಿದ ಚಿನ್ನವನ್ನು ಮನೆಗೆ ಕೊಂಡೊಯ್ಯುತ್ತಿದ್ದರು. ಆದರೆ ನಿನ್ನೆ ಬೇರೆ ಕೆಲಸದ ನಿಮಿತ್ತ ಅಂಗಡಿಯಲ್ಲಿಯೇ ಚಿನ್ನವನ್ನು ಇಟ್ಟಿದ್ದರು ಎನ್ನಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












