ಶಿವಮೊಗ್ಗ: ನಗರದ ಊರಗಡೂರಿನಲ್ಲಿ ಸೋಮವಾರ ರಾತ್ರಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್(16) ಹತ್ಯೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳೆಲ್ಲರೂ ಅಪ್ರಾಪ್ತರಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಂಕೇತ್ಗೆ ಚಿರಪರಿಚಿತರೇ ಆಗಿದ್ದಾರೆ.ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದ ಹತ್ಯೆಯಲ್ಲಿ ಅಂತ್ಯಗೊಂಡಿದ್ದು, ಊರಗಡೂರಿನಲ್ಲಿ ಶೋಕ ಮಡುಗಟ್ಟಿದೆ. ಹಿಂದು-ಮುಸ್ಲಿಂ ಸಮುದಾಯದ ಪ್ರಮುಖರೆಲ್ಲರೂ ಮೃತ ಬಾಲಕನ ಕುಟುಂಬದ ಶೋಕದಲ್ಲಿ ಭಾಗಿಯಾಗಿದ್ದಾರೆ.
ಸಂಕೇತ್ ಜತೆಗೆ ಆರೋಪಿಗಳು ಎರಡು ದಿನಗಳ ಹಿಂದೆಯೇ ಕ್ರಿಕೆಟ್ ಪಂದ್ಯದ ವಿಚಾರವಾಗಿ ಜಗಳವಾಡಿದ್ದರು. ಘಟನೆಯ ದಿನ ಆರೋಪಿಗಳೆಲ್ಲರೂ ಮತ್ತೋರ್ವ ಬಾಲಕ (ಆತ ಸಂಕೇತ್ ಗೆಳೆಯನೂ ಹೌದು)ನೊಂದಿಗೆ ಜಗಳವಾಡುತ್ತಿದ್ದರು. ಸಂಕೇತ್ ಜಗಳ ಬಿಡಿಸಲು ಹೋದಾಗ ಆತನ ಮೇಲೆ ಆರೋಪಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂಬುದನ್ನು ಎಸ್ಪಿ ಬಿ.ನಿಖಿಲ್ ಸ್ಪಷ್ಟಪಡಿಸಿದ್ದಾರೆ.
ಆರೋಪಿಗಳು ಯಾವುದೇ ಆಯುಧ ಬಳಸಿಲ್ಲ. ಕೈನಿಂದಲೇ ಗುದ್ದಿದ್ದಾರೆ. ಹೊಡೆತದ ತೀವ್ರತೆಗೆ ಸಂಕೇತ್ ಮೃತಪಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ. ರಾತ್ರಿಯೇ ಸಂಕೇತ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮಂಗಳವಾರ ಊರಗಡೂರಿನ ಬಾಲಕನ ಮನೆಗೆ ತರುವ ವೇಳೆಗೆ ಅಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ನೆರೆಹೊರೆಯವರೂ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದರು. ಆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.ಘಟನೆ ಖಂಡಿಸಿ ಕೆಲ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಈ ಭಾಗದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿದೆ. ಮಕ್ಕಳು ದೊಡ್ಡವರ ಮಾತು ಕೇಳುತ್ತಿಲ್ಲ. ಹೀಗಾಗಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಣೆಗೆ ಕಡಿವಾಣ ಹಾಕಬೇಕು. ಯಾವ ಕಾರಣಕ್ಕೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಭೇಟಿ ನೀಡಿದ ಪ್ರಮುಖರು: ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಆಯನೂರು ಮಂಜುನಾಥ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮುಂತಾದವರು ಮೃತ ಬಾಲಕನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಎಸ್ಪಿ ಬಿ.ನಿಖಿಲ್, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್.ಹೇಮಂತ್ ಕೂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.
ಗಾಂಜಾ ಪರೀಕ್ಷೆ?
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆರೋಪಿ ಸ್ಥಾನದಲ್ಲಿರುವ ಅಪ್ರಾಪ್ತರು ಗಾಂಜಾ ಸೇವನೆ ಮಾಡಿದ್ದರೇ? ಎಂಬುದರ ಪತ್ತೆಗೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದೆ. ಒಂದು ವೇಳೆ ಮಾದಕ ವಸ್ತು ಬಳಕೆ ಮಾಡಿರುವುದು ದೃಢಪಟ್ಟರೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆಯಲಿದೆ.
ಸಿಎಂ ದಿಗ್ಭ್ರಮೆ 15 ಲಕ್ಷ ರೂ. ಪರಿಹಾರವಿದ್ಯಾರ್ಥಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ವಾಗ್ದಾನವನ್ನು ನೊಂದ ಕುಟುಂಬಕ್ಕೆ ನೀಡಿದ್ದಾರೆ. ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬವನ್ನು ಸಂತೈಸುವ ಉದ್ದೇಶದಿಂದ ಮೃತನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವುದರ ಜತೆಗೆ, ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕ್ರಮವಹಿಸಲಾಗುವುದು. ಕೊಲೆಯಲ್ಲಿ ಭಾಗಿಯಾದವರು ಇನ್ನೂ ಚಿಕ್ಕಪ್ರಾಯದ ಹುಡುಗರು ಎಂದು ಕೇಳಿ ದಿಗ್ಭಮೆಯಾಯಿತು. ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಂಡು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಾಲ್ಯದಲ್ಲೇ ದ್ವೇಷ, ಹಿಂಸೆ, ಅಪರಾಧ ಕೃತ್ಯಗಳ ದುರ್ಬುದ್ಧಿ ಬೆಳೆಸಿಕೊಳ್ಳುವುದು ಅತ್ಯಂತ ಅಪಾಯಕಾರಿ. ಇಂತಹ ಮನಸ್ಥಿತಿಯಿರುವವರು ದುಶ್ಚಟಗಳಿಗೆ ದಾಸರಾದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಪೋಷಕರು ಸಹ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು, ಮಕ್ಕಳು ಹಾದಿ ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳಬೇಕು. ಶಾಲೆಯ ಸುತ್ತಮುತ್ತ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯಬಿದ್ದರೆ ಪೊಲೀಸರ ನೆರವನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಕರೆ ಮಾಡಿ ಸಾಂತ್ವನಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕೇತ್ ಪಾಲಕರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು. 15 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ಹಾಗೂ ಶಿಕ್ಷಣ ಇಲಾಖೆಯಿಂದ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದಿದ್ದಾರೆ.
















