ಉಡುಪಿ: ಕರಂಬಳ್ಳಿ ವೆಂಕಟರಮಣ ದೇಗುಲದಲ್ಲಿ ದಿ. ವಿ.ಎಸ್. ಆಚಾರ್ಯರ ಹೆಸರಿನಲ್ಲಿ ಅನ್ನಛತ್ರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಮಾಡುವ ಯೋಜನೆಗೆ ತಗಲುವ ನಾಲ್ಕು ಕೋಟಿ ರೂಪಾಯಿಗಳನ್ನು ಒಂದು ವಾರದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಉಡುಪಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಧರ್ಮ ರಕ್ಷಣೆ ಮಾಡುವವರು ಧರ್ಮ ರಕ್ಷಕರು. ಈ ಮಾತಿನಲ್ಲಿ ಭಾರತೀಯರಿಗೆ ಅಚಲವಾದ ನಂಬಿಕೆ ಇದೆ. ಸತ್ಯ, ಅಹಿಂಸೆ, ಹಾಗೂ ಸದಾಚರಗಳು ಯಾವುದೇ ಧರ್ಮದ ತಳಹದಿ. ವೆಂಕಟರಮಣ ದೇಗುಲದ ಅಭಿವೃದ್ಧಿಗೆ ಅಂದಿನ ಸಚಿವರಾಗಿದ್ದ ದಿ. ವಿ.ಎಸ್. ಆಚಾರ್ಯ ಹಾಗೂ ಶಾಸಕ ರಘುಪತಿ ಭಟ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಮುಜರಾಯಿ ಇಲಾಖೆಯಿಂದ ₹25 ಲಕ್ಷ ಅನುದಾನ ನೀಡಲಾಗಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ 95 ಸಾವಿರ ಮಂದಿಗೆ ಅನ್ನದಾಸೋಹ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಡಿಸಿದರು.
ನಮ್ಮ ಧರ್ಮ, ಆಚಾರ-ವಿಚಾರ ಹಾಗೂ ಸಂಸ್ಕೃತಿ, ಪರಂಪರೆ ಜಗತ್ತಿಗೆ ಮಾದರಿಯಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿ ರಾಮದೇವರ ಮೂರ್ತಿಯನ್ನು ಪ್ರತಿಷ್ಠಾಪಣೆಗೊಳಿಸುವ ವೇಳೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳೊಂದಿಗೆ ಕಳೆದ ಸಮಯ ನನ್ನ ಪೂರ್ವ ಜನ್ಮದ ಫಲ. ಇಂದು ಪೇಜಾವರ ಶ್ರೀಗಳ ರಾಮಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ ಎಂದು ಹೇಳಿದರು. ರಾಮಮಂದಿರ ನಿರ್ಮಾಣಕ್ಕೆ ಕೂಲಿಕಾರ್ಮಿಕರಿಂದ ₹100 ರಿಂದ ₹ 500 ಸಂಗ್ರಹ ಆಗುತ್ತಿದ್ದು, ಇದು ಮಂದಿರ ನಿರ್ಮಾಣಕ್ಕೆ ಇಡೀ ಭಾರತೀಯರು ಆಸಕ್ತಿ ವ್ಯಕ್ತಪಡಿಸುತ್ತಿರುವುದರ ಸೂಚಕ. ಆಡಳಿತವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಉಡುಪಿ ಶ್ರೀಕೃಷ್ಣನ ಹಾಗೂ ವೆಂಕಟರಮಣ ದೇವರ ಅನುಗ್ರಹ ಲಭಿಸಿದೆ ಎಂದರು.
ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ದೇವಳದ ತಂತ್ರಿ ಪಾಡಿಗಾರು ವಾಸುದೇವ ತಂತ್ರಿ ಶುಭಸಂದೇಶ ನೀಡಿದರು. ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಬಿ. ಚವ್ಹಾಣ್, ಸಂಸದೆ ಶೋಭಾ ಕರಂದ್ಲಾಜೆ, ದೇವಳದ ಆಡಳಿತ ಮೊಕ್ತೇಸರ ಹಾಗೂ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀಮಹಿಷಮರ್ದಿನಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಕೆ. ರವಿರಾಜ್ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಯಶ್‍ಪಾಲ್ ಎ. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಡಳಿತ ಮಂಡಳಿಯ ಅಧ್ಯಕ್ಷ ವಕೀಲ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಕೆ. ಗೋಪಾಲ ಶೆಟ್ಟಿ, ಶೇಖರ ಜತ್ತನ್ನ, ಲಕ್ಷ್ಮಣ ಸೇರಿಗಾರ, ಲಕ್ಷ್ಮೀನಾರಾಯಣ ಆಚಾರ್ಯ, ಸುಂದರ ಅಮೀನ್, ಶೈಲಶ್ರೀ, ರಂಜನ್ ಕೆ., ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.