ವಿಶ್ವಕರ್ಮ ಸಮುದಾಯಕ್ಕೆ 300 ಕೋಟಿ ರೂ. ಆರ್ಥಿಕ ಪ್ಯಾಕೇಜ್‌ ಘೋಷಿಸಿ: ವಿಶ್ವಕರ್ಮ ಮಹಾಸಭಾ ಆಗ್ರಹ

ಉಡುಪಿ: ನೇಕಾರರು, ಮೀನುಗಾರರ ಸಾಲ ಮನ್ನಾ ಮಾಡಿದಂತೆ ಅತೀ ಶೀಘ್ರವಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ  ಮಾಡಬೇಕು. ಕೊರೊನಾದಿಂದಾಗಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಿಶ್ವಕರ್ಮ ಸಮುದಾಯಕ್ಕೆ ತುರ್ತಾಗಿ 300 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಆಗ್ರಹಿಸಿದರು.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೊನಾ ಸಮಸ್ಯೆಯಿಂದಾಗಿ ಸಮುದಾಯದ ಪರಿಸ್ಥಿತಿ ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ. ಕಳೆದ ಆರೇಳು ವರ್ಷದಲ್ಲಿ ರಾಜ್ಯದ ಸುಮಾರು 18 ಸಾವಿರ ಜನರಿಗೆ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ 95 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ. ಅದರಲ್ಲಿ 7 ಲಕ್ಷ ರೂ. ಸಾಲವನ್ನು ಫಲಾನುಭವಿಗಳು ಮರುಪಾವತಿ ಮಾಡಿದ್ದಾರೆ.
ಈಗ ಕೊರೊನಾ ಸಂಕಷ್ಟದಿಂದ ಯಾರೂ ಸಾಲ ಕಟ್ಟುವ ಸ್ಥಿತಿಯಲ್ಲೇ ಇಲ್ಲ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸಿ ಮತ ನೀಡಿ ಶಾಸಕರಾಗಿ ಆಯ್ಕೆಗೊಳ್ಳುವಲ್ಲಿ ಸಹಕರಿಸಿದ್ದಾರೆ. 3 ಜಿಲ್ಲೆಗಳ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ನಿಗಮದ ಸಾಲ ಮನ್ನಾ ಮತ್ತು 300 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಾಯಿಸಬೇಕು. ಇಲ್ಲದಿದ್ದರೆ ವಿಶ್ವಕರ್ಮ ಸಮುದಾಯದವರು ಬೇರೆ ದಿಕ್ಕಿನತ್ತ ಯೋಚನೆ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದರು.
ಬಿಜೆಪಿ ಸರ್ಕಾರದಿಂದ ವಿಶ್ವಕರ್ಮರಿಗೆ ಅನ್ಯಾಯ
ಪಂಚ ಕಸುಬು ಮಾಡುವ ವಿಶ್ವಕರ್ಮರ ಸಹಿತ ರಾಜ್ಯದಾದ್ಯಂತ ವಿಶ್ವಕರ್ಮ ಸಮುದಾಯವೇ ಕೊರೊನಾ ಮಹಾಮಾರಿಯ ಸಂಕಷ್ಟದಿಂದ ಕಂಗೆಟ್ಟು, ಬದುಕು ದುಸ್ತರವಾಗಿದೆ. ಕಾರ್ಮಿಕರೇ ಹೆಚ್ಚಾಗಿರುವ ನಮ್ಮ ಸಮುದಾಯದಲ್ಲಿ ನಮ್ಮ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲ. ಕೊರೊನಾ ಬಂದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಮುಖ್ಯಮಂತ್ರಿಗಳು ಬಹುತೇಕ ಕಾರ್ಮಿಕರೇ ಇರುವ ವಿಶ್ವಕರ್ಮ ಸಮುದಾಯಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸದೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ವಿಶ್ವಕರ್ಮ ಸಮುದಾಯದವರನ್ನು ಅವಕಾಶ ವಂಚಿತರನ್ನಾಗಿ ಮಾಡಿದ್ದಾರೆ. ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಷ್ಟು ಜನ ವಿಶ್ವಕರ್ಮ ಸಮುದಾಯದವರಿಗೆ ಅವಕಾಶ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಮುದಾಯದ ಕನಿಷ್ಠ ಒಬ್ಬರಿಗೆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವ ನೀಡಬೇಕು. ರಾಜ್ಯದ “ಎ” ದರ್ಜೆಯ ಎಲ್ಲಾ ದೇವಸ್ಥಾನಗಳಲ್ಲೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ನಂಜುಂಡಿ ಅವರಿಗೆ ಅಧಿಕಾರದ ಶಕ್ತಿ ಕೊಡಿ
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ನಮ್ಮ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರನ್ನು ಹಿಂದುಳಿದ ವರ್ಗಗಳ ನಾಯಕರನ್ನಾಗಿ ಬೆಳೆಸುತ್ತೇವೆಂದು ಮಾತು ಕೊಟ್ಟಿದ್ದೀರಿ. ಆದರೆ ಈಗ ಕೇವಲ ಒಂದು ಜಾತಿಗೆ ಸಿಮೀತಗೊಳಿಸಿದ್ದೀರಿ. ನಮಗೆ ಎಂಎಲ್‌ಸಿ ಗೌರವದ ಸ್ಥಾನ ಮುಖ್ಯ ಅಲ್ಲ. ಹೆಸರಿಗೊಂದು ಎಂಎಲ್‌ಸಿ ಹೆಸರು ಬೇಡ. ಅವರಿಗೆ ಅಧಿಕಾರದ ಶಕ್ತಿ ಕೊಡಿ, ಆ ಮೂಲಕ ಸಮಾಜದ ಅಭಿವೃದ್ಧಿಗೆ ಒತ್ತು ನೀಡಿ ಎಂದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ 2 ಜನ ವಿಶ್ವಕರ್ಮರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕು. ರಾಜ್ಯ 224 ವಿಧಾನಸಭಾ ಕ್ಷೇತ್ರದಲ್ಲೂ ನಿಗಮ ಮಂಡಳಿ, ಕಾರ್ಪೋರೇಶನ್‌ಗಳಲ್ಲಿ ಕನಿಷ್ಠ 4 ಮಂದಿ ವಿಶ್ವಕರ್ಮರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡಬೇಕು ಎಂದು ರಮೇಶ್ ಆಚಾರ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಬೈಂದೂರು, ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಮುಖಂಡ ಎಚ್. ರಮೇಶ್‌ ಆಚಾರ್ಯ ಹೆಬ್ರಿ, ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಕೋಶಾಧಿಕಾರಿ ರಾಜೇಶ್‌ ಆಚಾರ್ಯ ಬೈಂದೂರು, ವಿಶ್ವಕರ್ಮ ಸಮಾಜದ ಹಿರಿಯ ಬಾರ್ಕೂರು ಗಂಗಾಧರ ಆಚಾರ್ಯ ಉಪಸ್ಥಿತರಿದ್ದರು.