ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಿ: ಅಪರ ಜಿಲ್ಲಾಧಿಕಾರಿ

ಉಡುಪಿ ಮಾ.3: ಮಾರ್ಚ್ 4 ರಿಂದ ಮಾರ್ಚ್ 23 ರ ರವರೆಗೆ 2020 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ನಡೆಯಲಿದ್ದು, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ, ಯಾವುದೇ ಪರೀಕ್ಷೆಗಳನ್ನು ಲೋಪದೋಷಗಳಾಗದಂತೆ ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನೇಮಕಾತಿ ಮಾಡಿದ ಪರೀಕ್ಷಾ ಕೇಂದ್ರಗಳ ವೀಕ್ಷಕರು ಗಮನ ಹರಿಸಬೇಕು. ಪರೀಕ್ಷಾ ವಿಚಾರದಲ್ಲಿ ಜಿಲ್ಲೆಗೆ ಕಪ್ಪು ಚ್ಯುತಿ ಬಾರದಂತೆ ಎಚ್ಚರ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಕುರಿತು ನೇಮಕಾತಿ ಮಾಡಿದ ಪರೀಕ್ಷಾ ಕೇಂದ್ರಗಳ ವೀಕ್ಷಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಧಿಕಾರಿಗಳ ವ್ಯಾಪ್ತಿಗೆ ಅನುಗುಣವಾಗಿ ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ವೀಕ್ಷಕರನ್ನು ನೇಮಿಸಲಾಗಿದೆ. ಅನಿವಾರ್ಯ/ಗಂಭೀರ ಕಾರಣಗಳನ್ನು ಹೊರತು ಪಡಿಸಿ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿರುವ ಅಧಿಕಾರಿಗಳಿಗೆ ಬದಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಅವಕಾಶವಿಲ್ಲ. ಪರೀಕ್ಷಾ ಕೇಂದ್ರಗಳ ವೀಕ್ಷಕರು ಕಡ್ಡಾಯವಾಗಿ ತಮಗೆ ವಹಿಸಿರುವ ಕರ್ತವ್ಯಕ್ಕೆ ಹಾಜರಾಗಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ರಾಜ್ಯದಲ್ಲಿ  ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಕಾರ ಮತ್ತು ಪಿಯು ಇಲಾಖೆಯು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರಮುಖವಾಗಿ ಟ್ರೆಜರಿ, ಇಲಾಖೆ ಹಾಗೂ ಪಿಯು ಬೋರ್ಡ್‍ನಲ್ಲಿ ಪ್ರಶ್ನಾ ಪತ್ರಿಕೆಯ ಸಿಸಿಟಿವಿ ಮೊನಿಟರಿಂಗ್ ನಡೆಸಲಾಗುತ್ತಿದ್ದು, 24 ಗಂಟೆಯೂ ಸಿಸಿಟಿವಿ ಮೊನಿಟರಿಂಗ್ ಗಾಗಿ ಜಿಲ್ಲಾಧಿಕಾರಿ ಕಚೇರಿಯ ಸ್ಟಾಫ್‍ನ್ನು ನಿಯೋಜಿಸಲಾಗಿದೆ. ಪ್ರಶ್ನಾ ಪತ್ರಿಕೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ತಹಶೀಲ್ದಾರ್, ಬಿಓ ಹಾಗೂ ನಿಯೋಜಿತ ಪ್ರಾಚಾರ್ಯರ ಉಪಸ್ಥಿತಿಯಲ್ಲಿ ಟ್ರೆಜರಿಯಿಂದ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ತಪ್ಪುಗಳಾಗದಂತೆ ತಡೆಯುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ಹೊರತು ಪಡಿಸಿ ಇತರ ಸರಕಾರಿ ಇಲಾಖಾ ಅಧಿಕಾರಿಗಳನ್ನು ಪರೀಕ್ಷಾ ವೀಕ್ಷಕರನ್ನಾಗಿ ನಿಯೋಜಿಸಲಾಗಿದ್ದು, ಸಿಸಿಟಿವಿ ಎದುರಿನಲ್ಲಿ ಪರೀಕ್ಷಾ ವೀಕ್ಷಕರ ಸಮ್ಮುಖದಲ್ಲಿ ಪ್ರಶ್ನಾ ಪತ್ರಿಕೆಯ ಬಂಡಲ್‍ಗಳನ್ನು ಬಿಡಿಸಲಾಗುವುದು. ಪರೀಕ್ಷೆ ನಡೆಯುವ ವೇಳೆ ಪ್ರಶ್ನಾ ಪತ್ರಿಕೆ ಲೀಕ್ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸೆಂಟರ್ ಕಸ್ಟೋಡಿಯನ್‍ಗೆ ಮಾತ್ರ ಬೇಸಿಕ್ ಫೋನ್ ಅಥವಾ ಲ್ಯಾಂಡ್ ಲೈನ್‍ನ್ನು ಮಾತ್ರ ಬಳಸುವ ಅವಕಾಶ ನೀಡಲಾಗಿದೆ. ಪರೀಕ್ಷೆಗಳು ಮುಗಿದ ಬಳಿಕ ಪರೀಕ್ಷಾ ವೀಕ್ಷಕರ ನೇತೃತ್ವದಲ್ಲಿ ಬಂಡಲ್ ಮಾಡಿದ ಉತ್ತರ ಪತ್ರಿಕೆಗಳನ್ನು ಪೋಸ್ಟಲ್ ಸಿಸ್ಟಮ್ ಮೂಲಕ ಡಿಸ್ಪ್ಯಾಚ್ ಮಾಡಲಾಗುತ್ತದೆ. ಇದೆಲ್ಲವನ್ನು ಪರೀಕ್ಷಾ ವೀಕ್ಷಕರು ಕಟ್ಟುನಿಟ್ಟಾಗಿ ಮೊನಿಟರ್ ಮಾಡಬೇಕಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಲೋಪದೋಷ ರಹಿತವಾಗಿ ನಡೆಯುವಂತೆ ಅಧಿಕಾರಿಗಳು ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಡಿಡಿಪಿಯು ಭಗವಂತ ಕಟ್ಟಿಮನೆ ಮಾತನಾಡಿ, ವೀಕ್ಷಕರಿಗೆ ಹಾಗೂ ಪರೀಕ್ಷಾ ಕ್ರಮಗಳಿಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಐಡಿ ಕಾರ್ಡ್‍ಗಳನ್ನು ನೀಡಲಾಗುತ್ತಿದ್ದು, ಪರೀಕ್ಷಾ ಸಮಯದಲ್ಲಿ ಹೊರಗಿನ ವ್ಯಕ್ತಿಗಳು, ಹಾಗೂ ಸಂಶಯಾತ್ಮಕ ವ್ಯಕ್ತಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಪ್ರಶ್ನಾ ಪತ್ರಿಕೆ ಲೀಕ್ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಕಡ್ಡಾಯವಾಗಿ ಪ್ರವೇಶ ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರದಿಂದ 100 ಮೀಟರ್ ವರೆಗೂ ನಿಷೇಧಾಜ್ಜೆ ಜಾರಿಗೊಳಿಸಲಾಗಿದ್ದು, ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಯಾವುದೇ ಲೋಪ ದೋಷಗಳಿಲ್ಲದೇ ಪರೀಕ್ಷಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ನಗರ ಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ನಳಿನಿ, ಜಿಲ್ಲಾ ಕಾರ್ಮಿಕ ಇಲಾಖಾ ಅಧಿಕಾರಿ ಬಾಲಕೃಷ್ಣ, ಕುಂದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಕುಂದಾಪುರ ವಲಯ ಅರಣ್ಯ ಅಧಿಕಾರಿ ಪ್ರಭಾಕರ ಕುಲಾಲ್, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೇಖಾ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.