ಉಡುಪಿ: ಬಹುಮಾನದ ಆಸೆಗೆ ಬಿದ್ದು ಬರೋಬ್ಬರಿ 26 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಉಡುಪಿ: 12 ಲಕ್ಷ ರೂ. ಬಹುಮಾನದ ದುರಾಸೆಗೆ ಹೋಗಿ ವ್ಯಕ್ತಿಯೊಬ್ಬರು 26 ಲಕ್ಷ ರೂ. ಕಳೆದುಕೊಂಡ ಘಟನೆ ಒಂದೂವರೆ ವರ್ಷದ ಬಳಿಕ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಉಡುಪಿಯ ಕೆ. ನಾಗರಾಜ ಭಟ್ ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ 2019ರ ಮಾರ್ಚ್ 29ರಂದು ವಂಚಕನೊಬ್ಬ ಕರೆ ಮಾಡಿ, ‘ನಿಮಗೆ ನ್ಯಾಪ್ಟಾಲ್ ಕಂಪನಿ ಹೆಸರಿನಲ್ಲಿ ಸ್ಕ್ರಾಚ್ ಕೂಪನ್ ಬಂದಿದ್ದು, ನೀವು 12 ಲಕ್ಷ ರೂ. ವಿಜೇತರಾಗಿದ್ದೀರಿ ಎಂದು ಹೇಳಿದ್ದಾನೆ. ಬಳಿಕ ಆ ವ್ಯಕ್ತಿ ಹಣವನ್ನು ಪಡೆಯಬೇಕಾದರೆ ರಿಜಿಸ್ಟ್ರೇಶನ್ ಚಾರ್ಜ್ ಪಾವತಿಸುವಂತೆ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ. ಈತನ ಮಾತು ನಂಬಿದ ನಾಗರಾಜ ಭಟ್, ಏಪ್ರಿಲ್ 4 ರಂದು 12 ಸಾವಿರ ರೂ. ಹಣವನ್ನು ಪಾವತಿಸಿದ್ದಾರೆ.

ಆ ನಂತರ ಆರೋಪಿ ಬೇರೆ ಬೇರೆ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ಜಿಎಸ್‌ಟಿ ಟ್ಯಾಕ್ಸ್, ವೆರಿಫಿಕೇಶನ್ ಚಾರ್ಜ್ ಎಂದು ಹೇಳಿ 2019ರ ಜುಲೈ 28ರ ವರೆಗೆ ಬರೋಬ್ಬರಿ 26,47,650 ರೂ.ಗಳನ್ನು ಖಾತೆ ಜಮೆ ಮಾಡಿಸಿಕೊಂಡು ವಂಚಿಸಿದ್ದಾನೆ. ಇದೀಗ ನಾಗರಾಜ ಭಟ್ ಒಂದೂವರೆ ವರ್ಷದ ಬಳಿಕ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.