ಉಡುಪಿ: ಮಲಬಾರ್ ಗೋಲ್ಡ್ ನಿಂದ 9 ವಸತಿರಹಿತ ಕುಟುಂಬಗಳಿಗೆ ₹ 7 ಲಕ್ಷ ಸಹಾಯಧನ ವಿತರಣೆ

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಸಿಎಸ್ ಆರ್ ಯೋಜನೆಯಡಿಯಲ್ಲಿ ಒಂಭತ್ತು ಅರ್ಹ ವಸತಿ ರಹಿತ ಕುಟುಂಬಗಳಿಗೆ ಒಟ್ಟು ₹ 7 ಲಕ್ಷ ಮೊತ್ತದ ಸಹಾಯಧನವನ್ನು ಇಂದು ಸಂಸ್ಥೆಯ ಉಡುಪಿ ಶಾಖೆಯಲ್ಲಿ ವಿತರಣೆ ಮಾಡಲಾಯಿತು.

ಫಲಾನುಭವಿಗಳಿಗೆ ಚೆಕ್ ವಿತರಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮನುಷ್ಯ ಹಣ, ಶ್ರೀಮಂತಿಕೆಯ ಒಟ್ಟಿಗೆ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಶಾಂತಿ, ನೆಮ್ಮದಿ ಬಹಳ ಮುಖ್ಯ. ಇದು ಮನುಷ್ಯನನ್ನು ಬಹಳ ದೂರ ಕೊಂಡೊಯ್ಯುತ್ತದೆ ಎಂದರು.

ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅರ್ಥ ಮಾಡಿ ಕೊಳ್ಳುವವರು ಕಡಿಮೆ ಇದ್ದಾರೆ. ಆದರೆ ಈ ಕಾರ್ಯವನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ಮಾಡುತ್ತಿದೆ. ಆತ್ಮ ತೃಪ್ತಿಗಿಂತ ದೊಡ್ಡ ಲಾಭ ಬೇರೆಯಿಲ್ಲ. ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಸಹಾಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಇಂತಹ ಇನ್ನಷ್ಟು ಸಮಾಜಮುಖಿ ಯೋಜನೆಗಳನ್ನು ಹಾಕಿಕೊಂಡು ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಶ್ರೀಮಂತರು ಆರ್ಥಿಕವಾಗಿ ಹಿಂದುಳಿದವರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಆಗ ಬಡತನ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ‌ ಎಂದು ಹೇಳಿದರು.

ಶ್ರೀಮಂತರ ಸಂಪತ್ತಿನಲ್ಲಿ ಬಡವರ ಹಕ್ಕು ಕೂಡ ಇದೆ. ಆ ಹಕ್ಕನ್ನು ನಾವು ಅವರಿಗೆ ನೀಡಬೇಕು. ಆಗ ಸಮಾಜದಲ್ಲಿನ ಆರ್ಥಿಕ ತಾರತಮ್ಯವನ್ನು ಹೋಗಲಾಡಿಸಬಹುದು. ಮಲಬಾರ್ ಗೋಲ್ಡ್ ಸಂಸ್ಥೆಯ ಈ ಕಾರ್ಯ ಶ್ರೀಮಂತರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ್ ಶೆಣೈ, ತಾಪಂ ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ದಿನೇಶ್ ಬಾಂಧವ್ಯ, ರಾಘವೇಂದ್ರ ಪ್ರಭು ಕರ್ವಾಲು, ಆಸೀಫ್ ಅಪತ್ಭಾಂಧವ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾ ಸರಸ್ವತಿ ಸ್ವಾಗತಿಸಿದರು. ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ವಂದಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಮಲಬಾರ ಗೋಲ್ಡ್ ಉಡುಪಿ ಶಾಖಾ ವತಿಯಿಂದ ಹೌಸಿಂಗ್ ಚಾರಿಟಿ ಮೂಲಕ ಮನೆ ಕಟ್ಟಲು 2020ರ ಅಕ್ಟೋಬರ್ ವರೆಗೆ 23 ಕುಟುಂಬಕ್ಕೆ 20 ಲಕ್ಷ ರೂ. ಮೊತ್ತದ ಸಾಮಗ್ರಿಗಳನ್ನು ವಿತರಿಸಲಾಗಿದೆ. 418 ವಿದ್ಯಾರ್ಥಿನಿಯರಿಗೆ 9.70ಲಕ್ಷ ರೂ. ವಿದ್ಯಾರ್ಥಿ ವೇತನ, 415 ರೋಗಿಗಳಿಗೆ 2.33ಲಕ್ಷ ರೂ. ಮೊತ್ತದ ಔಷಧಿ, 2300 ಕುಟುಂಬಗಳಿಗೆ 11.50ಲಕ್ಷ ರೂ. ಮೌಲ್ಯದ ಆಹಾರ ಕಿಟ್ ನೀಡಲಾಗಿದೆ. ವಿವಾಹ ನಿಧಿಯ ಮೂಲಕ 31 ವಧುವಿಗೆ 14.05ಲಕ್ಷ ರೂ. ವೌಲ್ಯದ ಚಿನ್ನ ನೀಡಲಾಗಿದೆ.