ಉದ್ಯಾವರ ಗ್ರಾಪಂ: ಅಧ್ಯಕ್ಷ ಸ್ಥಾನ ಬಿಜೆಪಿ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು

ಉಡುಪಿ: ಉದ್ಯಾವರ ಗ್ರಾಮ ಪಂಚಾಯತ್ ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಅಧ್ಯಕ್ಷ ಸ್ಥಾನ ಬಿಜೆಪಿ ದಕ್ಕಿದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ.

ಆ ಮೂಲಕ ಉದ್ಯಾವರ ಗ್ರಾಪಂನಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಬಿಜೆಪಿಯ ಹಿರಿಯ ಸದಸ್ಯ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ, ಬಹುಮತ ಇದ್ದರೂ ಮೀಸಲಾತಿಯಿಂದಾಗಿ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಕಳೆದುಕೊಂಡಿತು. ಕಾಂಗ್ರೆಸ್ ಬೆಂಬಲಿತ ಮಧುಲತಾ ಶಶಿಧರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಕೃಷ್ಣ ಶ್ರೀಯಾನ್ 17 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಮಿತೇಶ್ ಸುವರ್ಣ 13 ಮತ ಪಡೆದರು. ಪಂಚಾಯತಿಯ 30 ಸ್ಥಾನಗಳಲ್ಲಿ ಬಿಜೆಪಿ 15, ಕಾಂಗ್ರೆಸ್ 13 ಮತ್ತು ಪಕ್ಷೇತರರು ಇಬ್ಬರು ಜಯಗಳಿಸಿದ್ದರು. ಈಚೆಗೆ ಇಬ್ಬರು ಪಕ್ಷೇತರರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.