ಉದ್ಯಾವರ: ಧ್ವನಿ ಇದ್ದವರು ಮತ್ತು ಶಕ್ತಿ ಉಳ್ಳವರು ಮಾತ್ರ ಸಮಾಜದಲ್ಲಿ ಬೆಳೆಯುವಂತಾಗಿದೆ. ದೀನ ದಲಿತರು, ಬಡವರು, ನಿರ್ಗತಿಕರು ಮತ್ತು ಇತರರೆಲ್ಲರೂ ಬದಿಗೆ ಸರಿಯಲ್ಪಡುತ್ತಿದ್ದಾರೆ. ಈ ಪ್ರಪಂಚ ನಮ್ಮದು. ನಿಮ್ಮದಲ್ಲ. ನಾನೇ ಶ್ರೇಷ್ಠ, ನೀನು ಕನಿಷ್ಠ. ನಾನು ಶ್ರೀಮಂತ, ನೀನು ಬಡವ. ಇದೆಲ್ಲ ನನ್ನದು. ನಿನಗಿಲ್ಲ ಇದರಲ್ಲಿ ಪಾಲು. ಇಂತಹ ವ್ಯವಸ್ಥೆ ವಿಶ್ವದಲ್ಲಿ ಮಾತ್ರವಲ್ಲದೆ ನಮ್ಮ ರಾಷ್ಟ್ರದಲ್ಲೂ ಕಾಣ ಸಿಗುತ್ತಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಚೇತನ್ ಲೋಬೊ ತಿಳಿಸಿದರು.
ಉದ್ಯಾವರ ಸೌಹಾರ್ದ ಸಮಿತಿ ನೇತೃತ್ವದಲ್ಲಿ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಭಾಭವನದಲ್ಲಿ ಸರ್ವಧರ್ಮೀಯರ ಸಹಕಾರದೊಂದಿಗೆ ನಡೆದ ಸೌಹಾರ್ದ ಕ್ರಿಸ್ ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಸ್ತುತ ವರ್ಷದ ಕ್ರಿಸ್ ಮಸ್ ಅನ್ನು 3 ಅಂಶಗಳೊಂದಿಗೆ ಆಚರಿಸೋಣ. ನಾವೆಲ್ಲ ಸಂತೋಷದಿಂದಿರುವ ಜೊತೆಗೆ ಇತರರನ್ನು ಸಂತೋಷ ಪಡಿಸೋಣ. ಸಮಾಜಕ್ಕೆ ಒಳ್ಳೆಯದನ್ನು ಮಾಡುವವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸೋಣ. ನಾವೆಲ್ಲರೂ ತೆಗೆದುಕೊಳ್ಳುವ ಕೈ ಗಳಾಗದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಕೈಗಳಾಗೋಣ’ ಎಂದರು.
ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿಯ ಉಪನ್ಯಾಸಕರಾಗಿರುವ ಪ್ರೊ. ವಿಣೇಶ್ ಅಮೀನ್ ಸಾಂತೂರು ಮಾತನಾಡಿ, ಯಾವುದೇ ಒಳ್ಳೆಯ ಕೆಲಸಗಳು ಮಾಡುತ್ತಿರುವಾಗ ಜಾತಿ ಧರ್ಮ ಅಡ್ಡಬರಬಾರದು. ಮಾಧ್ಯಮಗಳು ಒಳ್ಳೆಯ ಕೆಲಸಗಳಿಗೆ ಹೆಚ್ಚು ಪ್ರಚಾರ ನೀಡಬೇಕೆ ವಿನಾ ಕೆಟ್ಟ ಕೆಲಸಗಳಿಗಲ್ಲ. ಇಂದಿನ ಸಮಾಜ ಮನಸ್ಸು ಮನಸ್ಸು ಬೆಸೆಯುವ ಸಮಾಜವಾಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕುಲಪತಿ, ಸ್ಥಳೀಯ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ. ಲೋಬೊ ಮಾತನಾಡುತ್ತಾ, ಕಳೆದೆರಡು ವರ್ಷಗಳಿಂದ ಕೋವಿಡ್ ಅಟ್ಟಹಾಸದಿಂದ ಜನರು ಸಂಕಷ್ಟದಲ್ಲಿದ್ದಾರೆ. ಮಾರಕ ಸೋಂಕಿಗೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಪ್ರಸ್ತುತ ವರ್ಷದ ಕ್ರಿಸ್ ಮಸ್ಸನ್ನು ಏಸುಕ್ರಿಸ್ತರ ಮಾತಿನಂತೆ ನಾವೆಲ್ಲರೂ ಸಂಕಷ್ಟದಲ್ಲಿರುವ ಸಹೋದರ ಸಹೋದರಿಯರ ಬಾಳಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ನಕ್ಷತ್ರಗಳಾಗೋಣ ಎಂದರು.
ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌಹಾರ್ದ ಸಮಿತಿ ಉದ್ಯಾವರದ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕ್ರಿಸ್ಮಸ್ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸೌಹಾರ್ದ ಸಮಿತಿ ಕಾರ್ಯದರ್ಶಿ ಆಬಿದ್ ಅಲಿ ಸ್ವಾಗತಿಸಿದರೆ, ಕೋಶಾಧಿಕಾರಿ ಪ್ರತಾಪ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಮತ್ತು ಶ್ರೀಜಾ ಕಾರ್ಯಕ್ರಮ ನಿರೂಪಿಸಿದರು.