ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಎರಡು ಬೆಡ್‌ರೂಮ್ ಮನೆ ಅಥವಾ ಮೂರು ಸೆಂಟ್ಸ್ ಜಮೀನು ನೀಡಿ, ಕೊಡಗು ಮಾದರಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಕೆಲ ಕುಟುಂಬಗಳು ತಮಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗ ನೀಡಿದರೆ ಸಾಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಅದರ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಸದ್ಯ ಅಪಾಯದಲ್ಲಿರುವ ಮನೆಗಳನ್ನು ಬಿಟ್ಟು ತೆರಳಿರುವವರಿಗೆ ಅಲ್ಲಿಯ ತನಕ ಪ್ರತಿ ತಿಂಗಳು ನಿರ್ದಿಷ್ಟ ಬಾಡಿಗೆ ಮೊತ್ತ ನಿಡಲಾಗುವುದು. ಕಡಲ್ಕೊರೆತದಿಂದ 150 ಮನೆಗಳು ಮತ್ತು ಉಳ್ಳಾಲದಲ್ಲಿ ಬೀಚ್ ಅಭಿವೃದ್ಧಿಯಿಂದ ತೊಂದರೆಗೊಳಗಾಗುವ 40 ಮನೆಗಳಿರುವುದು ಈಗಾಗಲೇ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.