ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಇಂದು ಮಧ್ಯಾಹ್ನ ಸಮುದ್ರಪಾಲಾಗಿದ್ದು, ಅದರಲ್ಲಿ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಬೆಂಗಳೂರಿನ ಯಲಹಂಕ ಜಿ.ಕೆ.ವಿ.ಕೆ. ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಹಾವೇರಿಯ ಸತೀಶ್ ಎಂ.ನಂದಿಹಳ್ಳಿ ಮತ್ತು ಬಾಗಲ ಕೋಟೆಯ ಸತೀಶ್ ಎಸ್.ಕಲ್ಯಾಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರಲ್ಲಿ ಸತೀಶ್ ನಂದಿಹಳ್ಳಿಯ ಮೃತದೇಹವು ಪತ್ತೆಯಾಗಿದೆ. ಇನ್ನೊಬ್ಬರಿಗೆ ಹುಡುಕಾಟ ಮುಂದುವರೆದಿದೆ.
ಜಿ.ಕೆ.ವಿ.ಕೆ. ಕೃಷಿ ವಿಶ್ವ ವಿದ್ಯಾಲಯದ 65 ಜನ ವಿದ್ಯಾರ್ಥಿಗಳು ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಕ್ಕೆ ಬಂದಿದ್ದು, ಇವರೆಲ್ಲ ಸಮುದ್ರದಲ್ಲಿ ಆಡುತ್ತಿದ್ದ ಇವರಿಬ್ಬರು ಸಮುದ್ರದ ತೆರೆಯ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರು.
ಅದರಲ್ಲಿ ಸತೀಶ್ ನಂದಿ ಹಳ್ಳಿಯನ್ನು ನೀರಿನಿಂದ ಮೇಲಕ್ಕೆ ಎತ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ತೀವ್ರವಾಗಿ ಅಸ್ವಸ್ಥಗೊಂಡ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.