ಕೋಟಿ–ಚೆನ್ನಯರ ಗರೋಡಿಗಳ ದರ್ಶನ; 100ಕ್ಕೂ ಹೆಚ್ಚು ಕಂತುಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರ

ಉಡುಪಿ: ಸ್ವಸ್ತಿಕ್‌ ಪ್ರೊಡಕ್ಷನ್‌ ಅರ್ಪಿಸುವ ‘ತುಳುನಾಡ ಬಂಗಾರ್‌ ಗರೋಡಿಲು’ ತುಳು ಸಾಕ್ಷ್ಯಚಿತ್ರ ಡಿ. 1ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ನಮ್ಮ ಕುಡ್ಲ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಾಕ್ಷ್ಯಚಿತ್ರದ ನಿರ್ದೇಶಕ ಸುರೇಂದ್ರ ಮೋಹನ್‌ ಅವರು, ಈ ಸಾಕ್ಷ್ಯಚಿತ್ರದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ–ಚೆನ್ನಯರ ಗರೋಡಿ ಕ್ಷೇತ್ರದ ದರ್ಶನ ಹಾಗೂ ಪರಿಚಯ ಮಾಡಲಾಗುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ, ಕಾಸರಗೋಡು, ಕುಂದಾಪುರ, ಮಡಿಕೇರಿ ಹಾಗೂ ಮುಂಬೈ ಸೇರಿದಂತೆ 242 ಗರೋಡಿಗಳನ್ನು ಸಂದರ್ಶಿಸಲಾಗಿದ್ದು, ಅಲ್ಲಿನ ಇತಿಹಾಸವನ್ನು ಸಾಕ್ಷ್ಯಚಿತ್ರದ ಮೂಲಕ ತುಳುನಾಡಿನ ಜನತೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ತುಳು ಸಾಕ್ಷ್ಯಚಿತ್ರವನ್ನು ನಮ್ಮ ಕುಡ್ಲ ಚಾನೆಲ್‌ನಲ್ಲಿ 100ಕ್ಕೂ ಹೆಚ್ಚು ಕಂತುಗಳಲ್ಲಿ ಎರಡುವರೆ ವರ್ಷಗಳ ಕಾಲ ಪ್ರಸಾರ ಮಾಡಲಾಗುವುದು. ಈಗಾಗಲೇ ಸಾಕ್ಷ್ಯಚಿತ್ರದ 9 ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನುಳಿದ ಭಾಗಗಳನ್ನು ಕೋಟಿ ಚೆನ್ನಯರು ಹುಟ್ಟಿದ ಪಡುಮಲೆ ಸೇರಿದಂತೆ ವಿವಿಧ ಗರೋಡಿ, ಧಾರ್ಮಿಕ ಸ್ಥಳಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿ ಗುರುವಾರ ಮರುಪ್ರಸಾರ ಸಾಕ್ಷ್ಯಚಿತ್ರದ ಮರುಪ್ರಸಾರ ಪ್ರತಿ ಗುರುವಾರ ರಾತ್ರಿ 9.30ರಿಂದ 10ಗಂಟೆಯವರೆಗೆ ನಡೆಯಲಿದೆ. ಮುಂದೆ ಈ ಸಾಕ್ಷ್ಯಚಿತ್ರದ ಕನ್ನಡ ಅವತರಣಿಕೆಯನ್ನು ಡಿಡಿ ಚಂದನ ವಾಹಿನಿಯಲ್ಲಿಯೂ ಪ್ರಸಾರ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಧರ್ಮಯೋಗಿ ಮೋಹನ್‌ ಸ್ವಾಮೀಜಿ ‘ತುಳುನಾಡ ಬಂಗಾರ್‌ ಗರೋಡಿಲು’ ತುಳು ಸಾಕ್ಷ್ಯಚಿತ್ರದ ಪೋಸ್ಟರ್‌ ಬಿಡುಗಡೆಗೊಳಿಸಿದರು. ಗೋಷ್ಠಿಯಲ್ಲಿ ಚಲನಚಿತ್ರ ನಿರ್ಮಾಪಕ ಅಶೋಕ್‌ ಎಂ. ಸುವರ್ಣ, ಕಿರುತೆರೆ ನಟ ರಮೇಶ್‌ ಕಲ್ಲೊಟ್ಟೆ, ಸಂಗೀತ ನಿರ್ದೇಶಕ ಕೃಷ್ಣ ಕಾಮತ್‌ ಇದ್ದರು.