ನಿಟ್ಟೆ ಕಾಲೇಜಿನಲ್ಲಿ ತುಳು ಸಂಘದ ವತಿಯಿಂದ ತುಡರ ಸಿರಿ ಕಾರ್ಯಕ್ರಮ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘವಾಗಿರುವ ‘ತುಡರ್’ ಇದರ ಆಶ್ರಯದಲ್ಲಿ ಸೆ.17 ರಂದು ‘ತುಡರ ಸಿರಿ’ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್ ತುಳು ಸಂಸ್ಕೃತಿಯ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುಳು ಲಿಪಿ ಮತ್ತು ಭಾಷೆಯ ಇತಿಹಾಸವನ್ನು ವರ್ಣಿಸಿ ಅದರ ಮಹತ್ವವನ್ನು ತಿಳಿಸುತ್ತಾ ತುಳು ಭಾಷೆ ಕರ್ನಾಟಕದ ಅಧಿಕೃತ ರಾಜ್ಯ ಭಾಷೆಯಾಗಬೇಕು‌ ಹಾಗೂ ಅದರಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ನಿರ್ವಹಿಸಬೇಕೆಂದು ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಡಾ.ಸಾಯಿಗೀತ ಅವರು ನಿಟ್ಟೆ ವಿಶ್ವವಿದ್ಯಾಲಯದಡಿಯಲ್ಲಿ ತುಳು ಭಾಷೆಯ ಬಗೆಗೆ ನಡೆಯುತ್ತಿರುವ ಸಂಶೋಧನೆಗಳ ಬಗೆಗೆ ವಿವರಿಸಿ ತುಳು ಭಾಷೆಯನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕು ಎಂದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತುಳು ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡಬೇಕು ಮತ್ತು ಇದಕ್ಕೆ ನಮ್ಮ ವಿದ್ಯಾಸಂಸ್ಥೆಯ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದರು.

ವೇದಿಕೆಯಲ್ಲಿ ನಿಟ್ಟೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಐ ಆರ್ ಮಿತ್ತಂತ್ತಾಯ, ಆಫ್ ಕ್ಯಾಂಪಸ್ ಸೆಂಟರಿನ ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮ್ ಡಾ. ಸುಬ್ರಮಣ್ಯ ಭಟ್, ರೆಸಿಡೆಂಟ್ ಇಂಜಿನಿಯರ್ ಡಾ. ಶ್ರೀನಾಥ್ ಶೆಟ್ಟಿ, ಡೀನ್- ಸ್ಟೂಡೆಂಟ್ ವೆಲ್ಫೇರ್ ಡಾ. ನರಸಿಂಹ ಬೈಲಕೆರಿ, ಸಂಘದ ಮಾರ್ಗದರ್ಶಕಿ ಶ್ರೀಮತಿ ಸುಧೀಕ್ಷಾ ಪೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ರೊಬೊಟಿಕ್ಸ್ ಕ್ಲಬ್ಬಿನ ವಿದ್ಯಾರ್ಥಿಗಳು ತಯಾರಿಸಿದ ನೂತನ ರೋಬೋಟನ್ನು ಅನಾವರಣ ಮಾಡಲಾಯಿತು.

ತುಡರ್ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಸ್ವಾಗತಿಸಿದರು. ವಿಘ್ನೇಶ್ ಶೆಟ್ಟಿ ವಂದಿಸಿದರು. ಅನ್ವೇಷ್ ಶೆಟ್ಟಿ ದಯಾನಂದ ಕತ್ತಲ್‌ಸಾರ್ ಅವರನ್ನು ಸಭೆಗೆ ಪರಿಚಯಿಸಿದರು. ಸುಶಾನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಸ್ಟೀರಿಯೋ ಕ್ಲಬ್ ಹಾಗೂ ಕಲಾಂಜಲಿ ತಂಡಗಳಿಂದ ತುಳು ಹಾಡುಗಳ ಗಾಯನ ಮತ್ತು ತುಳುನಾಡಿನ ಸಾಂಪ್ರದಾಯಿಕ ನೃತ್ಯದ ಪ್ರದರ್ಶನ ನಡೆಯಿತು.