ರಾಮನ ಪ್ರಾಣಪ್ರತಿಷ್ಠೆಯಂದು ವಿತರಿಸಲು ಒಂದು ಲಕ್ಷ ಲಡ್ಡುಗಳನ್ನು ರವಾನಿಸಿದ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನವು ಶುಕ್ರವಾರ ತನ್ನ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ಜನವರಿ 22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ರವಾನಿಸಿದೆ.

ಲಡ್ಡುಗಳನ್ನು ಶುದ್ಧ ತುಪ್ಪದಲ್ಲಿ ತಯಾರಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಟ್ರಸ್ಟ್ ಬೋರ್ಡ್ ಅಧ್ಯಕ್ಷ ಕರುಣಾಕರ್ ರೆಡ್ಡಿ ಮತ್ತು ಇಒ ಧರ್ಮಾ ರೆಡ್ಡಿ ವಿಶೇಷ ಪ್ರಯತ್ನ ನಡೆಸಿದ್ದಾರೆ ಎಂದು ಟಿಟಿಡಿ ಹೆಚ್ಚುವರಿ ಇಒ ವೀರ ಬ್ರಹ್ಮಂ ಹೇಳಿದ್ದಾರೆ.

ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯ ಸೌರಭ್ ಬೋರಾ ಮತ್ತು ಮಾಜಿ ಮಂಡಳಿಯ ಸದಸ್ಯ ಜೆ ರಾಮೇಶ್ವರ್ ರಾವ್ ಅವರು 2,000 ಕೆಜಿ ಶುದ್ಧ, ಸಾಂಪ್ರದಾಯಿಕ ತುಪ್ಪವನ್ನು ದಾನ ಮಾಡಿದ್ದಾರೆ. 3,000 ಕೆಜಿ ತೂಕದ ಒಂದು ಲಕ್ಷ ಲಡ್ಡುಗಳನ್ನು ಶ್ರೀವಾರಿ ಸೇವಕರು 350 ಬಾಕ್ಸ್‌ಗಳಲ್ಲಿ ತುಂಬಿದ್ದಾರೆ. ರೇಣಿಗುಂಟಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ಕಳುಹಿಸಲು ಪಾಲಿಕೆ ಸದಸ್ಯ ಶರತ್‌ಚಂದ್ರರೆಡ್ಡಿ ಅವರು ವ್ಯವಸ್ಥೆ ಮಾಡಿದ್ದಾರೆ.

ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.