24ನೇ ವರ್ಷದ ತ್ರಿಶಾ ದಿನಾಚರಣೆ: ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನಡೆಸಿದ ಸಾಧನೆ

ಉಡುಪಿ: ಬದುಕಿನಲ್ಲಿ ಇದಿರಾದ ಕಾಠಿಣ್ಯವನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿ ಸಂದೋಹವನ್ನು ಸಲಹಿದ ಮತ್ತು ಸಲಹುತ್ತಿರುವ ತ್ರಿಶಾ ಸಂಸ್ಥೆಯು 24 ವರುಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

ಈ ಹಿನ್ನೆಲೆಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಯೋಜಿಸಿದ್ದ ತ್ರಿಶಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಈ ಸುಧೀರ್ಘ ಪಯಣದಲ್ಲಿ ಸೋಲು-ಗೆಲುವುಗಳನ್ನು ಜೊತೆ ಸೇರಿಸಿಕೊಂಡು ಮುಂದೆ ಸಾಗುವುದು ಹೇಗೆ ಎನ್ನುವುದನ್ನು ಜೀವನ ಕಲಿಸಿಕೊಟ್ಟಿದೆ ಎಂದು ತಮ್ಮ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರಿಂದ ತ್ರಿಶಾ ನ್ಯೂಸ್ ಅನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಆಕರ್ಷಣೆಯಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ವೇಣುವಾದನ ನಡೆಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು.