ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ರಾಜ್ಯದ ಬಹುತೇಕ ಕಡೆ ಸರ್ಕಾರಿ ಬಸ್ ಸಂಚಾರ ಸ್ಥಗಿತ

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ರಾಜ್ಯದ ಬಹುತೇಕ ಕಡೆ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಟ ನಡೆಸಬೇಕಾಯಿತು.

ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ನೌಕರರು ಪಟ್ಟುಹಿಡಿದಿದ್ದು, ಇದರಿಂದ ಮುಷ್ಕರ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣ ಕಾಣುತ್ತಿದೆ. ಶುಕ್ರವಾರ ಬೆಳಿಗ್ಗೆ ಡಿಪೋಗಳಿಗೆ ಬಂದ ನೌಕರರು ಬಸ್‌ ಹೊರಕ್ಕೆ ತೆಗೆಯದೆ ಮುಷ್ಕರ ಆರಂಭಿಸಿದರು. ಬಸ್ ಚಾಲನೆ ಮಾಡಲು ಹೊರಟ ನೌಕರರನ್ನೂ ತರಾಟೆಗೆ ತೆಗೆದುಕೊಂಡು ಬಸ್ ಸಂಚಾರ ತಡೆದರು. ಕೆಲವೆಡೆ ಕಲ್ಲು ತೂರಾಟ ಕೂಡ ನಡೆದಿದೆ.

ಬಹುತೇಕ ಕಡೆ ಬೆಂಬಲ: 
ರಾಜ್ಯದಲ್ಲಿ ಮಂಗಳೂರು ವಿಭಾಗ ಹೊರತುಪಡಿಸಿ ಬಹುತೇಕ ಕಡೆ ಸಾರಿಗೆ ನಿಗಮಗಳ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಲಬುರ್ಗಿ, ಕೋಲಾರ, ಮೈಸೂರು, ಹುಬ್ಬಳ್ಳಿ ಭಾಗದಲ್ಲಿ ಸಾರಿಗೆ ನಿಗಮಗಳ ಬಸ್‌ಗಳ ಮೇಲೆ ಕಲ್ಲೆಸೆಯಲಾಗಿದೆ.

ಎಸ್ಮಾ ಕಾಯ್ದೆಯ ಎಚ್ಚರಿಕೆ: 

ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಎಚ್ಚರಿಕೆ ನೀಡಿದೆ.
ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವುದು ಅಗತ್ಯ ಸೇವೆಗಳ ಕಾಯ್ದೆ ವ್ಯಾಪ್ತಿಯಲ್ಲಿದೆ. ವಾರದ ರಜೆ ಅಥವಾ ದೀರ್ಘಕಾಲದ ರಜೆಯಲ್ಲಿ ಇರುವ ನೌಕರರನ್ನು ಹೊರತುಪಡಿಸಿ ಉಳಿದವರು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಈ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.