ಚಿಕ್ಕಮಗಳೂರು: ನಗರದ ಆಜಾದ್‌ಪಾರ್ಕ್ ನಲ್ಲಿ ವಿಭಿನ್ನವಾಗಿ ಬೀದಿ ನಾಟಕದ ಮೂಲಕ ಜಿಲ್ಲೆಯ ಸ್ಥಳೀಯ ನಿವಾಸಿಯೊಬ್ಬರು ನಿರ್ಮಾಣ ಮಾಡಿರುವ ‘ಮೆಟ ಡೋರ್’ ಸಿನಿಮಾದ ಟ್ರೇಲರ್ ಅನ್ನು ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಬುಧವಾರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಸಖರಾಯಪಟ್ಟಣದ ನಿವಾಸಿಯಾದ ಕಿರಣ್ ಅವರು ನಾಯಕ ನಟನಾಗಿ ಹಾಗೂ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತು ಮೆಟಡೋರ್ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಂದೇಶಗಳನ್ನು ಅಳವಡಿಸಲಾಗಿದ್ದು ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬರಲಿದೆ ಎಂದರು.
ಸಿನಿಮಾವು ಇದೇ ತಿಂಗಳು ಮೇ.27 ರಂದು ಬಿಡುಗಡೆಯಾಗಲಿದ್ದು , ಜಿಲ್ಲೆಯ ನಾಗರೀಕರು ಸಿನಿಮಾವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಬೇಕು. ಉತ್ತಮ ಚಿತ್ರಗಳನ್ನು ನೋಡುವ ಮೂಲಕ ಅವರ ಶ್ರಮವನ್ನು ಬೆಂಬಲಿಸಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಇದೇ ರೀತಿ ಸಮಾಜಕ್ಕೆ ಅರಿವು ಮೂಡಿಸುವಂತಹ ಚಿತ್ರ ನಿರ್ಮಿಸಲಿ ಎಂದು ಶುಭಹಾರೈಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಮಾತನಾಡಿ ಸಿನಿಮಾದಲ್ಲಿ ಮಟ್ಕಾಕ್ಕೆ ಸಂಬಂಧಿಸಿದ ಆಗುಹೋಗುಗಳನ್ನು ಟ್ರೇಲರ್ ನಲ್ಲಿ ಅಳವಡಿಸಿದ್ದಾರೆ. ಅಂತಹ ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿದ್ದು ಅದಕ್ಕೆ ಕಡಿವಾಣ ಹಾಕಲು ಚಿತ್ರ ಸಹಕಾರಿಯಾಗಲಿದೆ. ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್ ಮಾತನಾಡಿ ನಾವು ಮಾಡಿದ ಕರ್ಮ ನಾವೇ ಅನುಭವಿಸಬೇಕು ಎನ್ನುವುದು ಚಿತ್ರದ ಟ್ರೇಲರ್ ನಲ್ಲಿದ್ದು ಸಿನಿಮಾ ಬಿಡುಗಡೆಯಾದ ನಂತರ ಚಿತ್ರವನ್ನು ವೀಕ್ಷಿಸುವ ಮೂಲಕ ಆ ಸಂದೇಶವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ವಿವಿಧ ಪಕ್ಷದ ಮುಖಂಡರುಗಳು ಸಿನಿಮಾದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು. ನಂತರ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ ಜಿ.ಸುದರ್ಶನ್, ನಟರಾದ ಅಲ್ಲಪ್ಪಪೂಜಾರಿ, ರವಿ, ಕಾಂಗ್ರೆಸ್ ಮುಖಂಡರಾದ ರೇಖಾ ಹುಲಿಯಪ್ಪಗೌಡ, ರಸೂಲ್‌ಖಾನ್, ಮಂಜೇಗೌಡ, ಜೆಡಿಎಸ್ ಮುಖಂಡರಾದ ಹೊಲದಗದ್ದೆ ಗಿರೀಶ್, ಬಿ.ಎಂ.ತಿಮ್ಮಶೆಟ್ಟಿ, ನಗರಸಭಾ ಸದಸ್ಯ ಎ.ಸಿ.ಕುಮಾರ್, ಪ್ರೇಮ್ ಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಆರ್.ಶ್ರೀನಿವಾಸ್, ಉಪಸಭಾಪತಿ ಪ್ರದೀಪ್‌ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.