ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ

ಉಡುಪಿ ಜೂನ್ 19: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ತರಬೇತಿ ಕಾರ್ಯಕ್ರಮದಡಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಜೂನ್ 19 ರಂದು  ಸಾಣೂರು ಯುವಕ ಮಂಡಲದ ಹೊರ ಆವರಣದಲ್ಲಿ ಸಾಮಾಜಿಕ ಅಂತರದೊಂದಿಗೆ ನಡೆಸಲಾಯಿತು. ಗಿಡ ನೆಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು.

ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಬಿ. ಧನಂಜಯರವರು, ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸಾಧಕ ಬಾಧಕಗಳ ಸಂಪೂರ್ಣ ವಿವರದೊಂದಿಗೆ ಜೀವಾಮೃತ ತಯಾರಿ ಮತ್ತು ಅದರ ಬಳಕೆಯ ಉಪಯೋಗಗಳನ್ನು ತಿಳಿಸಿದರು.

ಡಾ. ನವೀನ್. ಎನ್. ಇ, ವಿಜ್ಞಾನಿಗಳು (ಬೇಸಾಯ ಶಾಸ್ತ್ರ), ಕಾರ್ಯಕ್ರಮದ ಕುರಿತು ಮಾತನಾಡಿ ಎರೆಜಲ ತಯಾರಿ ಮತ್ತು ಅದರ ಬಳಕೆ ಹಾಗೂ ಜೈವಿಕ ಗೊಬ್ಬರಗಳ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು.  ನಂತರ ಡಾ. ಸಚಿನ್.ಯು.ಎಸ್, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ), ಜೈವಿಕ ಗೊಬ್ಬರಗಳ ಬಳಕೆ, ಕೀಟ ಮತ್ತು ರೋಗದ ಬಾಧೆ ತಡೆಗಟ್ಟುವಲ್ಲಿ ಅವುಗಳ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನರಸಿಂಹ ಕಾಮತ್, ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ , ಸಾಣೂರು ಮತ್ತು ನಿರ್ದೇಶಕರು, ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವರು ಮಾತನಾಡಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರೈತರಿಗೆ ತಿಳಿಸಿದರು.   ಪ್ರವೀಣ್ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷರು , ಕಾರ್ಕಳ ಹಾಗೂ   ಪ್ರಸಾದ್ ಪೂಜಾರಿ, ಅಧ್ಯಕ್ಷರು, ಯುವಕ ಮಂಡಲ, ಸಾಣೂರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಯೊಬ್ಬ ರೈತರಿಗೂ, ಕೃಷಿ ಪರಿಕರಗಳ ಜೊತೆಗೆ ಮಾಸ್ಕ್ಗಳನ್ನು ವಿತರಿಸಿ, ಕೋವಿಡ್-19 ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ 52 ಕೃಷಿಕರು ಪಾಲ್ಗೊಂಡಿದ್ದು,  ಜ್ಞಾನದೇವ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.