ಸಾಣೂರಿನಲ್ಲಿ ಕಸ ಎಸೆದ ಪ್ರವಾಸಿಗರಿಗೆ ₹2,000 ದಂಡ!

ಉಡುಪಿ: ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಗಲೀಜು ಮಾಡಿದ ಪ್ರವಾಸಿಗರ ವಿರುದ್ಧ ಸಾಣೂರು ಗ್ರಾಮ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕೊಪ್ಪಳದಿಂದ ಬಂದ ಪ್ರವಾಸಿಗರ ತಂಡಕ್ಕೆ ₹2,000 ದಂಡ ವಿಧಿಸಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಎರಡು ವಾಹನಗಳಲ್ಲಿ ಬಂದಿದ್ದ ಪ್ರವಾಸಿಗರು ಸಾಣೂರು ಹೆದ್ದಾರಿ ಬದಿಯಲ್ಲಿ ಊಟ ಮಾಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲೇ ಬಿಸಾಡಿ ತೆರಳಲು ಯತ್ನಿಸಿದ ವೇಳೆ, ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರು ಅವರನ್ನು ತಡೆದು ಪ್ರಶ್ನಿಸಿದರು. ಈ ವೇಳೆ “ನಮ್ಮ ಊರಲ್ಲಿ ಇಂತಹ ಪದ್ಧತಿ ಇಲ್ಲ, ನಾವು ದಂಡ ಕೊಡುವುದಿಲ್ಲ” ಎಂದು ಪ್ರವಾಸಿಗರು ವಾಗ್ವಾದ ನಡೆಸಿದರೆಂದು ತಿಳಿದುಬಂದಿದೆ.
ಘಟನೆಯ ತೀವ್ರತೆಯನ್ನು ಮನಗಂಡ ಅಭಿವೃದ್ಧಿ ಅಧಿಕಾರಿ 112 ಸಹಾಯವಾಣಿಗೆ ಕರೆ ಮಾಡಿ, ಪ್ರವಾಸಿಗರನ್ನು ಕಾರ್ಕಳ ನಗರ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದರು. ಸ್ಥಳೀಯ ಸಾಮಾಜಿಕ ಮುಖಂಡ ಏರ್ನಡ್ಕ ವಿಶ್ವನಾಥ್ ಶೆಟ್ಟಿ ಸೇರಿದಂತೆ ಸಾರ್ವಜನಿಕರು ಪಂಚಾಯತ್ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ನಡುವೆ ದಂಡ ತಪ್ಪಿಸಲು ಪ್ರವಾಸಿಗರು ಫುಲ್ಕೇರಿ ಬೈಪಾಸ್ ವೃತ್ತದಿಂದ ಪಡುಬಿದ್ರೆ ಕಡೆಗೆ ವೇಗವಾಗಿ ತೆರಳಲು ಯತ್ನಿಸಿದರೆಂದು ತಿಳಿದುಬಂದಿದೆ. ಆದರೆ ಪಂಚಾಯತ್ ಅಧಿಕಾರಿಗಳು ಘಟನಾ ಸ್ಥಳದ ಫೋಟೋ ಮತ್ತು ವಿಡಿಯೊ ದಾಖಲಿಸಿಕೊಂಡು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರು.
ಪ್ರಕರಣ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಚರ್ಚೆ ನಡೆಸಿದ ಬಳಿಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಯಿತು. ಬಳಿಕ ಉಡುಪಿ ಕಡೆಗೆ ತೆರಳುತ್ತಿದ್ದ ವಾಹನವನ್ನು ರಾತ್ರಿ ವೇಳೆ ತಡೆದು ನಿಲ್ಲಿಸಿ ದಂಡ ಪಾವತಿಸಲು ಸೂಚಿಸಲಾಯಿತು.
ಪಂಚಾಯತ್ ಕಾಯ್ದೆಯಡಿ ಪ್ರವಾಸಿಗರಿಂದ ₹2,000 ದಂಡ ವಸೂಲಿ ಮಾಡಲಾಗಿದ್ದು, ಸ್ಕ್ಯಾನರ್ ಮೂಲಕ ಪಾವತಿ ಸ್ವೀಕರಿಸಿ ರಶೀದಿಯನ್ನೂ ನೀಡಲಾಗಿದೆ.
ಸಾಣೂರು ಗ್ರಾಮ ಪಂಚಾಯತ್‌ನ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಎಚ್ಚರಿಕೆಯ ಸಂದೇಶವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.