ನವದೆಹಲಿ: ಕರ್ನಾಟಕದ ‘ಸೋಲಿಲ್ಲದ ಸರದಾರ’ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದರೆ, ಎಸ್ ನಿಜಲಿಂಗಪ್ಪ (1968-69) ನಂತರ ಕರ್ನಾಟಕದಿಂದ ಆಯ್ಕೆಯಾದ ಎಐಸಿಸಿಯ ಎರಡನೇ ಅಧ್ಯಕ್ಷರಾಗುತ್ತಾರೆ.
ರಾಜಕೀಯದಲ್ಲಿ 50 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಖರ್ಗೆ ಅವರು ದಕ್ಷಿಣ ಭಾರತದಿಂದ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವ ಆರನೇ ಕಾಂಗ್ರೆಸ್ಸಿಗ. ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾದಲ್ಲಿ ಖರ್ಗೆಯವರು ಜಗಜೀವನ್ ರಾಮ್ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ನಾಯಕರಾಗಲಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಅನುಭವ ಖರ್ಗೆಯವರಿಗಿದೆ. ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲದೆ, ಎರಡು ಬಾರಿ ಕರ್ನಾಟಕದ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರದ ಆಡಳಿತ ಬಂದ ಬಳಿಕ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಶಶಿ ತರೂರ್ ಕೂಡಾ ಇದ್ದು, ಖರ್ಗೆ ಮತ್ತು ತರೂರ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಿದ್ದಲ್ಲಿ ಖರ್ಗೆಯವರಿಗೆ ಮತ ನೀಡಿ, ಬದಲಾವಣೆ ಬೇಕಿದ್ದಲ್ಲಿ ನನಗೆ ಮತ ನೀಡಿ ಎಂದು ತರೂರ್ ಹೇಳಿದ್ದಾರೆ. ಇವರಿಬ್ಬರ ಮಧ್ಯೆ ವಿಜಯಲಕ್ಷ್ಮಿ ಯಾರ ಕೊರಳಿಗೆ ಮಾಲೆ ಹಾಕುತ್ತಾಳೆನ್ನುವುದು ಸ್ವಲ್ಪ ದಿನದಲ್ಲೇ ತಿಳಿಯಲಿದೆ.