ಮಲ್ಪೆ-ಹೆಬ್ರಿ ಚತುಷ್ಪಥದಲ್ಲಿ ಟೋಲ್ ಸಂಗ್ರಹಣೆ ಇಲ್ಲ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯ ಮಲ್ಪೆ-ಹೆಬ್ರಿ ನಡುವಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಸಿದ್ದವಾದ ಬಳಿಕ ಯಾವುದೇ ಟೋಲ್ ಅಥವಾ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ಹೇಳಿದರು.

ಪೆರ್ಡೂರಿನಲ್ಲಿ ರಾಹೆ-169ಎ ವಿಭಾಗದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಸಚಿವೆ, ಮಲ್ಪೆಯಿಂದ ಹೆಬ್ರಿವರೆಗಿನ ವಿಸ್ತರಣೆಯು ಉಡುಪಿಯಲ್ಲಿ ಅಭಿವೃದ್ಧಿ ಮತ್ತು ಅವಕಾಶಗಳ ಹೊಸ ಅಲೆಯನ್ನು ಅನಾವರಣಗೊಳಿಸುತ್ತದೆ. ಈ ಸಂಪರ್ಕವನ್ನು ನವೀಕರಿಸಲು ಮೋದಿ ಸರ್ಕಾರವು ಹೆಚ್ಚಿನ ಉತ್ತೇಜನವನ್ನು ನೀಡಿದೆ. ಮಲ್ಪೆ-ಕರಾವಳಿ ಜಂಕ್ಷನ್-ಪರ್ಕಳ-ಹೆಬ್ರಿಯನ್ನು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಯು ಉಡುಪಿಯ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ದೂರದೃಷ್ಟಿಯ ನಿದರ್ಶನವಾಗಿದೆ ಎಂದರು.

Image

ಅಂದಾಜು ₹ 355.72 ಕೋಟಿ ವೆಚ್ಚದಲ್ಲಿ ಈ ಎರಡು ಮಾರ್ಗಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಪರ್ಕಳ ಮತ್ತು ಉಡುಪಿ ನಡುವಿನ ಮಾರ್ಗವನ್ನು ನಾಲ್ಕು ಪಥಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ರಸ್ತೆ ಅಗಲೀಕರಣ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವ ಭೂಮಾಲೀಕರು ಯೋಜನೆಯನ್ನು ಸ್ಥಗಿತಗೊಳಿಸಲು ನ್ಯಾಯಾಲಯದ ಮೊರೆ ಹೋಗದಂತೆ ಮನವಿ ಮಾಡಿದ ಸಚಿವರು, ಹಾಗೆ ಮಾಡಿದಲ್ಲಿ ಯೋಜನೆ ವಿಳಂಬವಾಗುತ್ತದೆ ಎಂದು ಹೇಳಿದರು.

ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ ಯೋಜನೆಯನ್ನು ವ್ಯವಸ್ಥಿತವಾಗಿ ಕೈಗೆತ್ತಿಕೊಳ್ಳುವಂತೆ ಯೋಜನೆಯ ಗುತ್ತಿಗೆದಾರರನ್ನು ಕೋರಿದರು.

ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೆ ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಭೇಟಿ ನೀಡಿ, ಶ್ರೀ ದೇವಿಗೆ ಪೂಜೆ ಸಲ್ಲಿಸಿದ ಸಚಿವೆ, ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣಾ ಕಾರ್ಯದಲ್ಲಿ ಸ್ವಯಂಸೇವಕರೊಂದಿಗೆ ಪಾಲ್ಗೊಂಡರು.

ಚಿತ್ರಕೃಪೆ: ಟ್ವಿಟರ್