ಟಿಪ್ಪರ್ ಡಿಕ್ಕಿ: ಸ್ಕೂಟರ್ ಸವಾರ ಮೃತ್ಯು

ಬ್ರಹ್ಮಾವರ: ಇಲ್ಲಿನ ಶೀರೂರು ಗ್ರಾಮದ ಹೆಮ್ಮಣ್ಕಿ ಕ್ರಾಸ್ ಬಳಿ ಟಿಪ್ಪರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಗಣೇಶ್(20) ಎಂದು ಗುರುತಿಸಲಾಗಿದೆ. ಶಿರೂರು ಮೂರುಕೈ ಕಡೆಯಿಂದ ಕಿರಾಡಿ ಕಡೆಗೆ ಬರುತ್ತಿದ್ದ ಟಿಪ್ಪರ್, ತಿರುವಿನಲ್ಲಿ ಮಂದಾರ್ತಿ ಕಡೆ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಗಣೇಶ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದರು.

ಗಂಭೀರವಾಗಿ ಗಾಯಗೊಂಡ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಣೇಶ್ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.