ಉಡುಪಿ: ತಡರಾತ್ರಿಯ ಕ್ಯಾಂಟೀನ್ ಪ್ರಾರಂಭಿಸಿದ ತೃತೀಯಲಿಂಗಿಗಳು; ಮೊದಲ ಎಂಬಿಎ ಪದವೀಧರ ತೃತೀಯಲಿಂಗಿಯಿಂದ ಹೂಡಿಕೆ

ಉಡುಪಿ: ಮೂವರು ತೃತೀಯಲಿಂಗಿಗಳ ಗುಂಪು ನಗರದಲ್ಲಿ ರಾತ್ರಿಯಿಡೀ ನಡೆಯುವ ಕ್ಯಾಂಟೀನ್ ಒಂದನ್ನು ತೆರೆದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪೂರ್ವಿ, ವೈಷ್ಣವಿ ಮತ್ತು ಚಂದನಾ ಮೂವರು ತೃತೀಯಲಿಂಗಿಗಳಾಗಿದ್ದು, ಉಡುಪಿಯ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಅನೇಕ ಪ್ರವಾಸಿಗರು ಈ ಪಟ್ಟಣದಲ್ಲಿ ತಡರಾತ್ರಿಯಲ್ಲಿ ಆಹಾರಕ್ಕಾಗಿ ಹುಡುಕುತ್ತಿದ್ದಾರೆ ಎಂದು ಗೊತ್ತಾದಾಗ ಹೊಸ ಪರಿಕಲ್ಪನೆಯ ತಡರಾತ್ರಿಯ ಕ್ಯಾಂಟೀನ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು ಮತ್ತು ಅವರ ಈ ಕೆಲಸಕ್ಕೆ ಬೆಂಬಲ ನೀಡಿದ್ದು, ಸಮೀಕ್ಷಾ ಕುಂದರ್, ಕರ್ನಾಟಕದಲ್ಲಿ ಎಂಬಿಎ ವ್ಯಾಸಂಗ ಮಾಡಿದ ಮೊದಲ ತೃತೀಯಲಿಂಗಿ! ಇದೀಗ ಮುಂಜಾನೆಯ 1 ಗಂಟೆಯಿಂದ 7 ಗಂಟೆವರೆಗೆ ಕಾರ್ಯನಿರ್ವಹಿಸುವ ತಿಂಡಿ ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಆಹಾರ ಮಳಿಗೆಯನ್ನು ನಗರದ ಹೃದಯ ಭಾಗದಲ್ಲಿ ಈ ಮೂವರು ತೆರೆದಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಅವರು, “ನಮಗೆ ಬೇಕಾಗಿರುವುದು ಗೌರವಯುತ ಜೀವನ. ನಾವು ಸ್ವಾವಲಂಬಿಯಾಗಲು ನಿರ್ಧರಿಸಿದ್ದೇವೆ. ಉಡುಪಿಯಲ್ಲಿ ತಡರಾತ್ರಿಯ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ನಾವು ಕಂಡುಕೊಂಡೆವು. ಅನೇಕ ಸ್ಥಳೀಯ ಹೊಟೇಲುಗಳು ಬೇಗನೆ ಮುಚ್ಚಲ್ಪಡುವುದರಿಂದ ಪ್ರವಾಸಿಗರು ಆಹಾರಕ್ಕಾಗಿ ಹುಡುಕಾಡುತ್ತಾರೆ. ನಾವು ನಮ್ಮ ಕ್ಯಾಂಟೀನ್ ಉದ್ಯಮವನ್ನು ಪ್ರಾರಂಭಿಸಿದಾಗಿನಿಂದ, ಸಾರ್ವಜನಿಕರ ಪ್ರತಿಕ್ರಿಯೆಯು ಉತ್ತೇಜನಕಾರಿಯಾಗಿದೆ ಮತ್ತು ಜನರಿಂದ ಗೌರವವನ್ನು ಪಡೆಯುತ್ತಿದ್ದೇವೆ” ಎಂದಿದ್ದಾರೆ.

“ಸಮುದಾಯದ ಜನರು ಉದ್ಯಮಗಳಿಗೆ ಪ್ರವೇಶಿಸುವುದನ್ನು ನೋಡಲು ಖುಷಿಯಾಗುತ್ತಿದೆ. ಇಂತಹ ಸಣ್ಣ ಉದ್ದಿಮೆಗಳನ್ನು ನಡೆಸಲು ಸಾರ್ವಜನಿಕರ ಬೆಂಬಲದ ಅವಶ್ಯಕತೆಯಿದೆ ಮತ್ತು ವಿಷಯಗಳು ನಿಧಾನವಾಗಿ ಬದಲಾಗುತ್ತಿವೆ. ನಾನು ಪ್ರತಿ ಹಂತದಲ್ಲೂ ನನ್ನ ಸ್ನೇಹಿತರಿಗೆ ಸಹಾಯ ಮಾಡಲು ಬಯಸುತ್ತೇನೆ ಮತ್ತು ಅವರು ತಮ್ಮ ಹೊಸ ಉದ್ಯಮದಲ್ಲಿ ಮಿಂಚಲಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಸಮೀಕ್ಷಾ ಹೇಳಿದ್ದಾರೆ.