ಲಿಂಗನಮಕ್ಕಿಗೆ ಒಂದೇ ದಿನ ಮೂರುವರೆ ಅಡಿ ನೀರು, ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ

ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ನಿರಂತರ ವರ್ಷಧಾರೆಯಾಗುತ್ತಿದೆ. ಮಳೆ ಎಡಬಿಡದೇ ಸುರಿದ ಪರಿಣಾಮ, ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದ ಮಾಣಿ ಜಲಾಶಯ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಧಿಕ 22 ಎಂಎಂ‌ ಮಳೆಯಾಗಿದೆ.ಈ ಹಿನ್ನೆಲೆಯಲ್ಲಿ ನಗರದ ಕೋರ್ಪಳಯ್ಯನ ಛತ್ರದ ಬಳಿಯ ಮಂಟಪ ಮುಳುಗುವ ಹಂತ ತಲುಪಿದ್ದು, ಇನ್ನೊಂದು ಅಡಿಯಷ್ಟು ನೀರು ಏರಿಕೆಯಾದರೆ ಮಂಟಪ ಸಂಪೂರ್ಣ ಮುಳುಗಡೆಯಾಗಲಿದೆ. ಹೀಗಾಗಿ ಮಂಟಪದ ಬಳಿ ಸಾರ್ವಜನಿಕರು ತಂಡೋಪತಂಡವಾಗಿ ಬಂದು ನದಿಯ ವಿಹಂಗಮ ನೋಟ ವೀಕ್ಷಿಸುತ್ತಿದ್ದಾರೆ. ಜಿಲ್ಲೆಯ ಹಲವೆಡೆಗಳಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಹಲವು ಕಡೆಗಳಲ್ಲಿ ಜಮೀನುಗಳು ಜಲಾವೃತಗೊಂಡಿವೆ.

ಅದರಂತೆ, ತುಂಗಾ ಜಲಾನಯದ ಪ್ರದೇಶಗಳಾದ ಶೃಂಗೇರಿ, ಕೊಪ್ಪ, ಆಗುಂಬೆ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ಡ್ಯಾಂ ಸಂಪೂರ್ಣವಾಗಿ ತುಂಬಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಗದ್ದೆಗಳತ್ತ ಮುಖ‌ ಮಾಡಿದ ರೈತರು: ಜೂನ್ ತಿಂಗಳಲ್ಲಿ ಸರಿಯಾದ‌ ಮಳೆಯಾಗದ ಕಾರಣ ರೈತರು ಹೊಲ, ಗದ್ದೆಗಳತ್ತ ಮುಖ‌ ಮಾಡಿರಲಿಲ್ಲ. ಜುಲೈ ತಿಂಗಳ ಮಧ್ಯ ಭಾಗದಿಂದ ಮಳೆ ಪ್ರಾರಂಭವಾಗಿದ್ದು, ರೈತರು ತಮ್ಮ ಹೊಲ ಗದ್ದೆಗಳತ್ತ ಮುಖ ಮಾಡಿದ್ದಾರೆ. ಭೂಮಿಯನ್ನು ಹಸನು ಮಾಡಿಟ್ಟಿದ್ದ ರೈತರು ಈಗ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆಗಾಗಲೇ ನಾಟಿ ಕಾರ್ಯ ಮುಗಿಸಬೇಕಿದ್ದ ಅನ್ನದಾತರು ಈಗ ನಾಟಿ ಮಾಡಲು ಸಸಿ ಮಡಿ ಮಾಡಿದ್ದಾರೆ. ಮಳೆ ಸ್ವಲ್ಪ ವಿರಾಮ ನೀಡಿದರೆ, ರೈತರು ನಾಟಿ ಕಾರ್ಯದಲ್ಲಿ ತೂಡಗಿಕೊಳ್ಳುತ್ತಾರೆ. ಮಲೆನಾಡಿನ ಕೆಲ ಭಾಗಗಳಲ್ಲಿ ನಾಟಿ ಮಾಡದೆ ಬಿತ್ತನೆ ಮಾಡುತ್ತಾರೆ. ಇನ್ನು ಜೋಳ ಬಿತ್ತನೆ ಮಾಡಿದವರು ಕಳೆ, ಕುಂಟೆ ಹೊಡೆಯುತ್ತಿದ್ದಾರೆ.

ಮಾಣಿಯಲ್ಲಿ ದಾಖಲೆಯ 22 ಎಂಎಂ‌ ಮಳೆ: ಮಲೆನಾಡಿನ ತವರು ಹೊಸನಗರ ತಾಲೂಕಿನಲ್ಲಿ ಬಿರುಸಿನ ಗಾಳಿ ಹಾಗೂ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾಣಿ ಜಲಾಶಯ ಪ್ರದೇಶದಲ್ಲಿ ರಾಜ್ಯದಲ್ಲಿ ಅತ್ಯಧಿಕ 22 ಎಂಎಂ‌ ಮಳೆ ದಾಖಲಾಗಿದೆ. ತಾಲೂಕಿನ ಸಾವೇಹಕ್ಲುನಲ್ಲಿ 200 ಎಂಎಂ, ಚಕ್ರ ನಗರದಲ್ಲಿ 190 ಎಂಎಂ, ಹುಲಿಕಲ್ಲಿನಲ್ಲಿ 173 ಎಂಎಂ, ಮಾಸ್ತಿ ಕಟ್ಟೆಯಲ್ಲಿ 170 ಎಂಎಂ, ಯಡಿಯೂರಿನಲ್ಲಿ 157 ಎಂಎಂ, ಹೊಸನಗರದಲ್ಲಿ 140 ಎಂಎಂ, ಕಾರ್ಗಲ್ ನಲ್ಲಿ‌ 136.8 ಎಂಎಂ, ಬಿದನೂರು ನಗರದಲ್ಲಿ 127 ಎಂಎಂ ಮಳೆಯಾಗಿದೆ.ಸದ್ಯತುಂಗಾ ಅಣೆಕಟ್ಟಿನಿಂದ ನದಿಗೆ 49 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. 21 ಕ್ರಸ್ಟ್ ಗೇಟ್​ನಿಂದ ನೀರನ್ನು‌ ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ಉಕ್ಕಿ ಹರಿಯುತ್ತಿದೆ.

ಜಿಲ್ಲೆಯ ಮಳೆ ಪ್ರಮಾಣದ ವರದಿ: ಶಿವಮೊಗ್ಗದಲ್ಲಿ 19.60 ಎಂಎಂ, ಭದ್ರಾವತಿಯಲ್ಲಿ 17.50 ಎಂಎಂ, ತೀರ್ಥಹಳ್ಳಿಯಲ್ಲಿ 77.90 ಎಂಎಂ, ಹೊಸನಗರದಲ್ಲಿ 98.00 ಎಂಎಂ, ಸಾಗರದಲ್ಲಿ 107.00 ಎಂಎಂ, ಸೊರಬದಲ್ಲಿ 53.10 ಎಂಎಂ, ಶಿಕಾರಿಪುರದಲ್ಲಿ 36.00 ಎಂಎಂ ಮಳೆಯಾಗಿದೆ.
ಇನ್ನು ಲಿಂಗನಮಕ್ಕಿ ಜಲಾಶಯ ಪದ್ರೇಶದಲ್ಲಿ‌ ಮೂರುವರೆ ಅಡಿ ಹೆಚ್ಚು ನೀರು ಸಂಗ್ರಹವಾಗಿದ್ದು, ಇಂದು ಬೆಳಗ್ಗೆ ನೀರಿನ ಮಟ್ಟ 1770.70 ಅಡಿ ದಾಖಲಾಗಿದೆ. ಜಲಾಶಯಕ್ಕೆ 52.374 ಕ್ಯೂಸೆಕ್ ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1797.65 ಅಡಿ ದಾಖಲಾಗಿತ್ತು. ಭಾನುವಾರ ಸಹ ತಾಲೂಕನಾದ್ಯಂತ ಬಿರುಸಿನ ಗಾಳಿ ಮಳೆ ಇದೆ.