ಬೆಳ್ತಂಗಡಿ: ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ನಡೆದ ಸಮಾವೇಶದಲ್ಲಿ ಸಹಸ್ರಾರು ಜನರು ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಭಾನುವಾರದಂದು ನಡೆದ ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ದೊರಕಿಸುವಂತೆ ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ನೆರದವರಲ್ಲಿ ಸೆರಗೊಡ್ಡಿ ನ್ಯಾಯ ಬೇಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನನ್ನ ಮಗಳಿಗೆ ನ್ಯಾಯ ಕೊಡಿಸಲು ಇಡೀ ದೇಶವೇ ಕೂಡಿ ಬಂದಿದೆ. ನನ್ನ ಮಗಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೀರಿ. ನಮ್ಮ ಮಗುವಿಗೋಸ್ಕರ ನ್ಯಾಯ ಕೇಳಲು ಅವಕಾಶ ಕೊಡಲಿಲ್ಲ. ಬಜರಂಗದಳದವರೊಂದಿಗೆ ಅಣ್ಣಪ್ಪನಲ್ಲಿ ನ್ಯಾಯ ಕೇಳಲು ಹೋಗಿದ್ದೆ. ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. ನನ್ನನ್ನು ಒಂದು ಗಂಟೆ ಹೊರಗಡೆ ಕಾಯಿಸಿದ್ದಾರೆ ಎಂದು ನೋವು ತೋಡಿಕೊಂಡರು.
ಆ ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಸ್ವಾಮಿಯನ್ನು ನಾನು ಜನರಲ್ಲಿ ನೋಡುತ್ತಿದ್ದೇನೆ. ಖಂಡಿತಾ ನಾನು ಗಟ್ಟಿಯಾಗಿ ಇದ್ದೇನೆ. ಇಷ್ಟು ಜನರ ಶಕ್ತಿ ನನ್ನಲ್ಲಿ ತುಂಬಿದೆ. ಅದು ಎಷ್ಟು ಬಾರಿ ನನ್ನ ಮಗಳನ್ನು ಅತ್ಯಾಚಾರ ಮಾಡಿದರೋ, ನನ್ನ ಮಗಳು ಎಷ್ಟು ನೋವು ತಿಂದಳೋ, 5-6 ಜನ ಅತ್ಯಾಚಾರ ಮಾಡಿದ್ದಾರೆ. ನ್ಯಾಯ ಸಿಗುತ್ತದೆ, ಅತ್ಯಾಚಾರಿಗಳು ಸಿಗುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮ್ಮ ನನ್ನನ್ನು ಬದುಕಿಸು ಎಂಬ ಕೂಗು ನನಗೆ ಈಗಲೂ ಕೇಳಿಸುತ್ತಿದೆ. ಅತ್ಯಾಚಾರ ಮಾಡಿ ಕಾಡಲ್ಲಿ ಬಿಸಾಡಿದ್ದಾರೆ. ಅತ್ಯಾಚಾರ ಮಾಡಿ ಬಿಟ್ಟಿದ್ದರೂ ತೊಂದರೆ ಇರುತ್ತಿರಲಿಲ್ಲ. ಆದರೆ ಕೊಂದೇ ಬಿಟ್ಟರು. ಇವತ್ತು ನಿಮ್ಮ ಕಾಲ ಬುಡಕ್ಕೆ ಬಂದು ನ್ಯಾಯ ಕೇಳುತ್ತಿದ್ದೇನೆ. ಯಾವುದೇ ಹಣದ ಆಮಿಷಕ್ಕೆ ನ್ಯಾಯವನ್ನು ಬಲಿ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.
ಆದಿಚುಂಚನಗಿರಿ ಮಠದ ಧರ್ಮಪಾಲ ಸ್ವಾಮೀಜಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂಪರ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಗೌಡ ಸಮುದಾಯದ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.