ಕೊಲಂಬೊ: ಶ್ರೀಲಂಕಾ ತಂಡದ ಆಲ್‌ರೌಂಡರ್ ತಿಸಾರ ಪೆರೇರ ಅವರು ಓವರ್‌ವೊಂದರಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ.
ಶ್ರೀಲಂಕಾದ ದೇಶಿ ಟೂರ್ನಿಯೊಂದರ ಪಂದ್ಯದಲ್ಲಿ ಪೆರೇರ 13 ಎಸೆತಗಳಲ್ಲಿ 52 ರನ್ ಗಳಿಸಿದರು. ಮೇಜರ್ ಕ್ಲಬ್ಸ್ ಸೀಮಿತ ಓವರ್‌ಗಳ ಲಿಸ್ಟ್ ‘ಎ‘ ಟೂರ್ನಿಯಲ್ಲಿ ಶ್ರೀಲಂಕಾ ಆರ್ಮಿ ತಂಡದ ನಾಯಕತ್ವ ವಹಿಸಿದ್ದ ಅವರು ಬ್ಲೂಮ್‌ಫೀಲ್ಡ್ ಕ್ರಿಕೆಟ್ ಆ್ಯಂಡ್ ಅಥ್ಲೆಟಿಕ್ ಕ್ಲಬ್ ತಂಡದ ವಿರುದ್ಧ ಈ ಸ್ಫೋಟಕ ಇನಿಂಗ್ಸ್ ಆಡಿದರು. ಭಾನುವಾರ ಪನಗೊಡದ ಆರ್ಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು.
ವೃತ್ತಿಪರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಒಂಬತ್ತನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಪೆರೇರ. ಇದಕ್ಕೂ ಮೊದಲು ಗ್ಯಾರಿ ಸೋಬರ್ಸ್, ರವಿಶಾಸ್ತ್ರಿ, ಹರ್ಷೆಲ್ ಗಿಬ್ಸ್, ಯುವರಾಜ್ ಸಿಂಗ್, ರಾಸ್ ವೈಟ್ಲಿ, ಹಜರತ್‌ವುಲ್ಲಾ ಜಜೈ, ಲಿಯೊ ಕಾರ್ಟರ್ ಹಾಗೂ ಇತ್ತೀಚೆಗೆ ಕೀರನ್ ಪೊಲಾರ್ಡ್ ಓವರ್‌ವೊಂದರಲ್ಲಿ ಆರು ಸಿಕ್ಸರ್ ಸಿಡಿಸಿದ್ದರು.