ಸಾಮಾಜಿಕ ಜಾಲತಾಣದಲ್ಲಿ ಸುಮ್ಮನೆ ಕಾಲಹರಣಕ್ಕೆ ಕಣ್ಣಾಡಿಸುತ್ತಿದ್ದಾಗ ಅರುಣಿಮಾ ಅಂತ ಕ್ಯಾನ್ಸರಿಗೆ ಸವಾಲೆಸೆದ ಹುಡುಗಿಯ ಜೀವನ ಪ್ರೀತಿಯ ಬಗ್ಗೆ ಓದಿದೆ ಆಗ ಅಕಸ್ಮಾತಾಗಿ ನನ್ನ ಕಣ್ಣು ಅಲ್ಲೇ ಹತ್ತಿರದಲ್ಲೇ ಬರೆದಿದ್ದ ಮತ್ತೊಂದು ಲೇಖನದ ಮೇಲೆ ಬಿಟ್ಟು ಅದುವೇ “ಕ್ಯಾನ್ಸರ್ ಎಂಬ ಯಮನಿಗೆ ಸಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ” ಅಂತ ತೃಪ್ತಿ ಹೆಗ್ಡೆ ಅನ್ನೋರು ಬರೆದ ಲೇಖನ ಅದನ್ನು ಓದುತ್ತ ಸಾಗಿದ ಹಾಗೆ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಅನ್ನೋ ಪುಸ್ತಕದ ಬಗ್ಗೆ ತಿಳಿಯಿತು ಕುತೂಹಲ ಬೆಳೆಯಿತು. ಪುಸ್ತಕ ತರಿಸಿಕೊಂಡೆ. ಪುಸ್ತಕ ನನ್ನ ಕೈ ಸೇರಿದ ಕೂಡಲೇ ಕುತೂಹಲ ತಡೆಯಲಾಗದೆ ಓದಲು ಕುಳಿತೆ. ಮೊದಲ ಪುಟ ತಿರುವಿದಾಗ ಲೇಖಕಿಯಾದ ಶ್ರುತಿಯವರ ಕಿರು ಪರಿಚಯವಿತ್ತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಣಿಗ ಗ್ರಾಮದವರಾದ ಶ್ರುತಿಯವರಿಗೆ ಕಾಲೇಜು ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೋಮ ಓದುತ್ತಿರುವಾಗಲೇ ಕ್ಯಾನ್ಸರ್ ಎಂಬ ಮಹಾಮಾರಿ ಎರಗಿ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ಸೇರಬೇಕಾಯಿತು.
ಚಿಕ್ಕ ವಯಸ್ಸಿನಲ್ಲೇ ಅಚಾನಕ್ಕಾಗಿ ವಕ್ಕರಿಸಿದ ಕ್ಯಾನ್ಸರ್ ಜೊತೆಗೆ ತಾನು ಹೋರಾಡಿ ಗೆದ್ದು ಗುಣಮುಖಳಾದ ತಮ್ಮ ಸ್ವಂತ ಅನುಭವವನ್ನು ಪುಸ್ತಕದಲ್ಲಿ ಎಳೆ ಎಳೆಯಾಗಿ ದಾಖಲಿಸಿದ್ದರು. ಪುಟಗಳನ್ನು ತಿರುವುತ್ತ ಸಾಗಿದ ನನಗೆ ಸಮಯದ ಅರಿವೇ ಆಗಲಿಲ್ಲ ಯಾವುದೂ ಬೇರೆ ಲೋಕಕ್ಕೆ ಪುಸ್ತಕದ ಬರೆವಣಿಗೆ ಕರೆದುಕೊಂಡು ಹೋಗಿತ್ತು ನಾನು ದಿಗ್ಬ್ರಮೆಯಲ್ಲೇ ಪುಸ್ತಕ ಓದುತ್ತ ಸಾಗಿದ್ದೆ.
ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಬಂದೊದಗಿದಾಗ ಮನಸ್ಸಲ್ಲಿ ಮೂಡಿದ ಭಾವನೆಗಳ ತೊಳಲಾಟವನ್ನು ಆ ನೋವಿನ ಕ್ಷಣಗಳ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು ನನಗಂತೂ ಕೆಲವು ಪುಟಗಳನ್ನೂ ಓದುವಾಗ ಮೈ ಜುಮ್ ಅನಿಸಿತ್ತು ಕೆಲವೆಡೆ ನನಗರಿವಿಲ್ಲದಂತೆ ಕಣ್ಣುಗಳು ತೇವಗೊಂಡವು. ಮನುಷ್ಯ ತಾನು ಸಾಯುತ್ತೇನೆ ಅಂತ ಗೊತ್ತಾದಾಗ ಕಲಿಯೋ ಪಾಠದಲ್ಲಿ ಅರ್ಧ ಪಾಠವನ್ನಾದರೂ ಬದುಕಿರುವಾಗಲೇ ಕಲಿತರೆ ಅದ್ಭುತಗಳನ್ನೇ ಸಾದಿಸಬಹುದು ಅನ್ನೋ ಮಾತು ಕೃತಿ ಓದಿ ಮುಗಿಸುವಾಗ ಪ್ರತಿಯೊಬ್ಬರಿಗೂ ಮನಸ್ಸಿನ ಮೂಲೆಯಲ್ಲಿ ಅನಿಸದೇ ಇರದು.
ಸೂಕ್ಷ್ಮ ಸ್ವಭಾವದವರಾದ ಶ್ರುತಿಯವರು ಕ್ಯಾನ್ಸರ್ ಅನ್ನೋ ಮಹಾಮಾರಿ ಜೊತೆ ಹೋರಾಡಿ ಗಟ್ಟಿಗಿತ್ತಿ ಆಗಿ ಬದಲಾದ ಕಥೆ ಕ್ಯಾನ್ಸರ್ ಜೊತೆಗೆ ನಿತ್ಯವೂ ಹೋರಾಡುತ್ತಿರೋ ಎಷ್ಟೋ ಜನರಿಗೆ ಆತ್ಮವಿಶ್ವಾಸ ತುಂಬಲು ಜೀವನೋತ್ಸಾಹ ಬೆಳೆಸಲು ನೆರವಾಗೋದ್ರಲ್ಲಿ ಎರಡು ಮಾತಿಲ್ಲ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರೋ ಇಂತಹ ವಿಭಿನ್ನ ಅಪರೂಪದ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟದ್ದಕ್ಕೆ ತನ್ಮೂಲಕ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದಕ್ಕೆ ಧೈರ್ಯ ತುಂಬಿದಕ್ಕೆ ಲೇಖಕಿಯಾದ ಶ್ರುತಿಯವರನ್ನು “ವಿಶ್ವ ಕ್ಯಾನ್ಸರ್ ದಿನ”ವಾದ ಇಂದು ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ.
ನಾಗೇಶ್ ಶೆಣೈ