ವಿಜ್ಞಾನಿಗಳು ಶುಕ್ರ ಮತ್ತು ಭೂಮಿಯನ್ನು ಅವಳಿ-ಜವಳಿಗಳು ಎಂದು ಕರೆಯುತ್ತಾರೆ. ಏಕೆಂದರೆ ಈ ಎರಡೂ ಗ್ರಹಗಳ ಗಾತ್ರವು ಸಮಾನವಾಗಿದೆ. ಶುಕ್ರವು ಬಹುತೇಕ ಭೂಮಿಯಷ್ಟೇ ದೊಡ್ಡದಾಗಿದೆ. ಸೌರವ್ಯೂಹದ ಒಳಭಾಗದಲ್ಲಿಯೇ ಅವು ರೂಪುಗೊಂಡಿವೆ. ಶುಕ್ರವು ಭೂಮಿಗೆ ಅತ್ಯಂತ ಹತ್ತಿರದ ಗ್ರಹವಾಗಿದೆ. ಇವೆರಡೂ ಕೂಡಾ ಒಂದೇ ಮೂಲ ವಸ್ತುಗಳಿಂದ ಮಾಡಲ್ಪಟ್ಟಿದೆ. ಭೂಮಿಗೂ ಶುಕ್ರನಿಗೂ ತುಂಬಾ ಸಾಮ್ಯತೆ ಇದೆ. ಆದರೂ ಈ ಎರಡೂ ಗ್ರಹಗಳು ವಿಭಿನ್ನ ಮಾರ್ಗಗಳಲ್ಲಿ ಚಲಿಸುತ್ತವೆ!
ಶುಕ್ರಗ್ರಹವು ತನ್ನ ಅಕ್ಷದ ಮೇಲೆ ಅಪ್ರದಕ್ಷಿಣಾಕಾರವಾಗಿ ಸುತ್ತುತ್ತದೆ. ಭೂಮಿ ಮತ್ತು ಇತರ ಗ್ರಹಗಳ ವಿರುದ್ದ ದಿಕ್ಕಿನಲ್ಲಿ ತಿರುಗುವ ಈ ಕ್ರಿಯೆಗೆ ಕಾರಣವೇನೆನ್ನುವುದು ಇನ್ನೂ ನಿಗೂಢ. ಶುಕ್ರನ ಮೇಲೆ ಸೂರ್ಯನು ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಮಿಸುತ್ತಾನೆ. ಆದರೆ ಭೂಮಿಯ ಮೇಲೆ ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುತ್ತಾನೆ.
ಶತಕೋಟಿ ವರ್ಷಗಳ ಹಿಂದೆ ಗ್ರಹದಷ್ಟೇ ದೊಡ್ಡ ಗಾತ್ರದ ಯಾವುದೋ ಒಂದು ವಸ್ತುವು ಶುಕ್ರಗ್ರಹಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರ ತಿರುಗುವಿಕೆಯ ದಿಕ್ಕನ್ನು ಬದಲಾಯಿಸಿರಬಹುದು ಎನ್ನುವುದು ದೀರ್ಘಕಾಲದ ಸಿದ್ಧಾಂತವಾಗಿದೆ. ಆದರೆ ಈ ಬಗ್ಗೆ ಶುಕ್ರ ಗ್ರಹವು ತನ್ನ ಗುಟ್ಟನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಶುಕ್ರನ ಮೇಲ್ಮೈಯಲ್ಲಿನ ತಾಪಮಾನವು 900 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಾಗಿದೆ. ಶುಕ್ರನ ಮೇಲೆ ಯಾವುದೇ ವಸ್ತುವನ್ನು ಇಳಿಸುವುದು ಅಸಾಧ್ಯ. ಅದು ತಕ್ಷಣವೆ ಕರಗಿ ನೀರಾಗಿ ಬಿಡುತ್ತದೆ. ಇಂಗಾಲದಿಂದಾಗಿ ಹಸಿರು ಮನೆ ಪರಿಣಾಮ ಇಲ್ಲಿ ಅತ್ಯಂತ ಹೆಚ್ಚಿದೆ. ಗ್ರಹವು15-ಮೈಲಿ-ದಪ್ಪ ಮೋಡಗಳ ಪದರದಲ್ಲಿ ಮುಚ್ಚಲ್ಪಟ್ಟಿದೆ. ಆ ಮೋಡಗಳು ಸಲ್ಫ್ಯೂರಿಕ್ ಆಮ್ಲದಿಂದ ಮಾಡಲ್ಪಟ್ಟಿವೆ. ಶುಕ್ರನ ಅಂಗಳದಲ್ಲಿರಲಿ ಶುಕ್ರನ ಮೇಲ್ಮೈ ಮೇಲೆ ಗಿರಕಿ ಹೊಡೆಯಲೂ ಉಪಗ್ರಹಗಳು ಪಡಿಪಾಟಲು ಪಡಬೇಕಾಗುತ್ತದೆ.
ಕಳೆದ ಹಲವಾರು ದಶಕಗಳಿಂದಲೂ ಖಗೋಳ ವಿಜ್ಞಾನಿಗಳ ಕುತೂಹಲವನ್ನು ಕೆರಳಿಸುತ್ತಿರುವ ಶುಕ್ರ ತನ್ನ ಗುಟ್ಟನ್ನು ಸಾಮಾನ್ಯಕ್ಕೆ ಬಿಟ್ಟುಕೊಡಲು ತಯಾರಿಲ್ಲ. ಯೂರೋಪಿಯನ್ ಸ್ಪೇಸ್ ಏಜೆನ್ಸಿಯು 2030-31ರ ಹೊತ್ತಿಗೆ ಎನ್ ವಿಶನ್ ಎಂಬ ನೌಕೆಯನ್ನು ಶುಕ್ರಗ್ರಹಕ್ಕೆ ಕಳಿಸಲಿದ್ದು 15 ತಿಂಗಳ ಪ್ರಯಾಣದ ಬಳಿಕ ಅದು ಶುಕ್ರನನ್ನು ತಲುಪಲಿದೆ. ತದನಂತರ 16 ತಿಂಗಳಲ್ಲಿ ಶುಕ್ರಗ್ರಹದ ಕಕ್ಷೆಯಲ್ಲಿ ನೆಲೆಯಾಗಲಿದೆ ಎನ್ನಲಾಗಿದೆ. ವಿಜ್ಞಾನಿಗಳು ಈ ಪ್ರಯತ್ನದಲ್ಲಿ ಅದೆಷ್ಟು ಸಫಲರಾಗಲಿದ್ದಾರೆ ಎನ್ನುವುದನ್ನು ಆ ಶುಕ್ರನೇ ಹೇಳಬೇಕು.
ಭಾರತೀಯ ಜ್ಯೋತಿಷ್ಯ ಪರಂಪರೆಯಲ್ಲಿ ಶುಕ್ರನಿಗೆ ತನ್ನದೇ ಆದ ಸ್ಥಾನವಿದೆ. ಶುಕ್ರವು ಪ್ರೀತಿ, ಸಂಬಂಧ, ಪ್ರಣಯ, ಸೌಂದರ್ಯ, ಲೈಂಗಿಕ ಜೀವನ, ಸಂಗಾತಿ ಯಾ ವ್ಯಾಪಾರ ಸಹವರ್ತಿಗಳೊಂದಿಗೆ ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಉತ್ತಮ ಶುಕ್ರವು ವ್ಯಕ್ತಿಯ ವೃತ್ತಿಪರ ಜೀವನದ ಸಾರವಾಗಿದೆ. ಸಾಮಾನ್ಯವಾಗಿ ಜೀವನದಲ್ಲಿ ಯಾರಾದರೊಬ್ಬರು ಯಶಸ್ಸು, ಕೀರ್ತಿ ಅಥವಾ ಹಣ ಸಂಪಾದನೆ ಮಾಡುತ್ತಿದ್ದರೆ ಆತನಿಗೆ ಶುಕ್ರದೆಶೆ ಶುರುವಾಗಿರಬೇಕು ಎಂದು ಹೇಳುವುದು ವಾಡಿಕೆ. ಶುಕ್ರನೆಂದರೆ ಅಷ್ಟು ಶಕ್ತಿಶಾಲಿ ಎಂದರ್ಥ.
ವ್ಯಕ್ತಿಯ ಜನ್ಮಸ್ಥಳ ಶುಕ್ರವು ಅವರ ಆಸೆಗಳನ್ನು ವ್ಯಕ್ತಪಡಿಸುವ ವಿಧಾನ, ಭಾವೋದ್ರೇಕಗಳು, ಯಾವುದನ್ನು ಗೌರವಿಸುತ್ತಾರೆ, ಸಂಬಂಧ, ಬೆರೆಯುವಿಕೆ, ಆನಂದವನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಜ್ಯೋತಿಷ್ಯದಲ್ಲಿ ಸ್ಫೂರ್ತಿ ಮತ್ತು ಉತ್ಸಾಹವನ್ನು ಹೇಗೆ ಹುಟ್ಟುಹಾಕಬಹುದು ಎಂಬುದನ್ನು ಕಂಡುಹಿಡಿಯಲು ಈ ಗ್ರಹವನ್ನು ನೋಡಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಭೂಮಿಯ ಅವಳಿಯಂತಿರುವ ಶುಕ್ರವು ಅತ್ಯಂತ ಪ್ರಭಾವಶಾಲಿ ಆದರೆ ಅಷ್ಟೇ ನಿಗೂಢ ಗ್ರಹ. ಆತ ತನ್ನ ಗುಟ್ಟನ್ನು ಬಿಟ್ಟು ಕೊಡುವನೇ? ಕಾಲವೆ ಉತ್ತರಿಸಬೇಕು.