ಇದು ವಿಶ್ವಕಪ್​ ಫೈನಲ್​ ಎಫೆಕ್ಟ್​ : 2 ಸಾವಿರದ ಹೋಟೆಲ್​ ರೂಮ್​ ಬಾಡಿಗೆ ಈಗ 50 ಸಾವಿರ

ಅಹಮದಾಬಾದ್​: ಎರಡು ಮದಗಜಗಳ ಆಟ ನೋಡಲು ಕ್ರಿಕೆಟ್​ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ದೇಶ, ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಎಷ್ಟೇ ಖರ್ಚಾದರೂ ಸರಿ ಪಂದ್ಯ ವೀಕ್ಷಿಸಬೇಕು ಎಂಬ ಅಭಿಮಾನಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಹಮದಾಬಾದ್‌ನಲ್ಲಿ ಹೋಟೆಲ್‌ಗಳು ರೂಮ್​​ಗಳ ದರವನ್ನು ವಿಪರೀತ ಹೆಚ್ಚಿಸಿವೆ. 2 ಸಾವಿರ ರೂಪಾಯಿ ಇರುವ ಕೊಠಡಿಗಳ ಬಾಡಿಗೆಯನ್ನು ಏಕಾಏಕಿ 50 ಸಾವಿರಕ್ಕೆ ಹೆಚ್ಚಿಸಿವೆ.
ಭಾರತದಲ್ಲಿ ಕ್ರಿಕೆಟ್​ ಬರೀ ಜ್ವರವಲ್ಲ, ಅದು ಎಂದಿಗೂ ಗುಣಮುಖವಾಗದ ಕಾಯಿಲೆ ಇದ್ದ ಹಾಗೆ. ಅದೆಷ್ಟೇ ದುಬಾರಿಯಾದ್ರೂ, ಎಷ್ಟೇ ದೂರವಿದ್ದರೂ ಸರಿ ಭಾರತದ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಗುಜರಾತ್​ನ ಅಹಮದಾಬಾದ್​ ಸಜ್ಜಾಗಿದ್ದು, ಅಲ್ಲಿನ ಹೋಟೆಲ್​ಗಳ ರೂಮ್​, ಪ್ರಯಾಣ ದರಗಳು ಗಗನಮುಖಿಯಾಗಿವೆ.ನವೆಂಬರ್ 19 ರಂದು ನಡೆಯುವ ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಕ್ರಿಕೆಟ್ ಅಭಿಮಾನಿಗಳು ಅಹಮದಾಬಾದ್‌ಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಹೋಟೆಲ್​ ರೂಮ್​ಗಳ ದರ, ಪ್ರಯಾಣ ವೆಚ್ಚ ಕೇಳಿದ್ರೆ ದಿಗಿಲಾಗುವುದಂತೂ ನಿಜ.

5 ಲಕ್ಷ ರೂಪಾಯಿ ಖರ್ಚು: ಭಾರತಕ್ಕೆ ಬಂದಿಳಿದ ಅಮೆರಿಕನ್​ ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಟಿಕೆಟ್​, ತಂಗಲು ಹೋಟೆಲ್​ ಕೊಠಡಿ, ಪ್ರಯಾಣ ಸೇರಿದಂತೆ ತಲಾ 5 ಲಕ್ಷ ಖರ್ಚು ಮಾಡಿದ್ದಾರೆ. ಅಹಮದಾಬಾದ್​ನಲ್ಲಿನ ಎಲ್ಲ ಕೊಠಡಿಗಳು ಭರ್ತಿಯಾಗಿವೆ. 2 ಸಾವಿರ ರೂಪಾಯಿ ದರದ ಕೊಠಡಿಗೆ 50 ಸಾವಿರ ನೀಡಿದ್ದೇವೆ. ಟಿಕೆಟ್​ಗೂ ದುಪ್ಪಟ್ಟು ದರ ನೀಡಿದ್ದೇವೆ ಎಂದು ಪಿಯೂಷ್​ ಪಾರಿಖ್​ ಎಂಬ ಅಭಿಮಾನಿಯೊಬ್ಬರು ತಿಳಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ನಾನು ಫ್ಲೋರಿಡಾದಿಂದ ಬಂದಿದ್ದೇನೆ. ಭಾರತ ಟೂರ್ನಿಯಲ್ಲಿ ಅದ್ಭುತವಾಗಿ ಆಡಿದೆ. ಲೀಗ್​ನ ಎಲ್ಲ1 ಪಂದ್ಯಗಳನ್ನು ಗೆದ್ದಿದೆ. ಅಂತಿಮ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಲಿದೆ ಎಂಬ ನಂಬಿಕೆ ಇದೆ. ವಿರಾಟ್​ ಕೊಹ್ಲಿ ಈ ಮ್ಯಾಚ್​​​​​ನಲ್ಲೂ ಶತಕ ಬಾರಿಸಲು ಎಂದು ಇತರ ಅಭಿಮಾನಿಗಳು ಆಶಿಸಿದರು.ವಿದೇಶಿಗರಿಗೆ ವಿಶೇಷ ಸ್ವಾಗತ: ಫೈನಲ್​ ಪಂದ್ಯ ವೀಕ್ಷಿಸಲು ಆಗಮಿಸುತ್ತಿರುವ ವಿದೇಶಿ ಕ್ರಿಕೆಟ್ ಅಭಿಮಾನಿಗಳ ಸ್ವಾಗತಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಡ್ರಮ್ ಮತ್ತು ಗಾರ್ಬಾದೊಂದಿಗೆ ಅವರನ್ನು ಸ್ವಾಗತಿಸಲಾಗುತ್ತಿದೆ. ಜೊತೆಗೆ ವಿಮಾನ ನಿಲ್ದಾಣದಲ್ಲಿ ವಿಶ್ವಕಪ್‌ನ ಪ್ರತಿಕೃತಿಯನ್ನೂ ಅಳವಡಿಸಲಾಗಿದೆ. ಅಮೆರಿಕದಿಂದ 16 ಕ್ರಿಕೆಟ್ ಅಭಿಮಾನಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶನಿವಾರ ಬೆಳಗ್ಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಾಳಿನ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ಎಂಬುದು ಅವರ ವಿಶ್ವಾಸ.