ಇದೇ ಮೊದಲ ಬಾರಿಗೆ ತೆಲುಗಿನಲ್ಲೇ ತೆಲಂಗಾಣ ಹೈಕೋರ್ಟ್‌ ತೀರ್ಪು

ಹೈದರಾಬಾದ್ (ತೆಲಂಗಾಣ): ಹಿರಿಯ ನ್ಯಾಯಮೂರ್ತಿ ಪಿ.ನವೀನ್ ರಾವ್ ಮತ್ತು ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರನ್ನೊಳಗೊಂಡ ಪೀಠವು ಆಸ್ತಿ ವಿವಾದದ ಪ್ರಕರಣದಲ್ಲಿ ಮಂಗಳವಾರ ತೆಲುಗಿನಲ್ಲಿ 44 ಪುಟಗಳ ತೀರ್ಪು ಪ್ರಕಟಿಸಿದೆನ್ಯಾಯಾಂಗದ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟವಾಗಬೇಕೆಂಬ ಬಲವಾದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ತೆಲಂಗಾಣ ಹೈಕೋರ್ಟ್ ತೆಲುಗಿನಲ್ಲೇ ತೀರ್ಪು ನೀಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಸ್ಥಳೀಯ ಭಾಷೆಗಳ ಪ್ರಾಮುಖ್ಯತೆಯನ್ನು ಗಮನಿಸಿ ಇತ್ತೀಚೆಗೆ ನ್ಯಾಯಾಲಯಗಳು ಮಾತೃಭಾಷೆಯತ್ತ ಒಲವು ತೋರಲು ಪ್ರಾರಂಭಿಸಿವೆ. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್​ಗಳ ಪ್ರಮುಖ ತೀರ್ಪುಗಳನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ..ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಯಾವುದೇ ಅರ್ಜಿಗಳನ್ನು ಸಲ್ಲಿಸಿದಾಗ ಅದರ ಪೂರಕ ದಾಖಲೆಗಳು ಮತ್ತು ಪುರಾವೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಬೇಕು. ಸ್ಥಳೀಯ ಭಾಷೆಯಲ್ಲಿದ್ದರೂ ಸಹ ನ್ಯಾಯಾಲಯದ ದಾಖಲೆಗಳಿಗೆ ಇಂಗ್ಲೀಷ್​ನಲ್ಲಿ ಸಲ್ಲಿಸಬೇಕು.

ಇದರ ಭಾಗವಾಗಿಯೇ ಹೈಕೋರ್ಟ್​ಗಳು ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ನೀಡಲು ಆಸಕ್ತಿ ತೋರುತ್ತಿವೆ. ಈಗಾಗಲೇ ಕೇರಳ ಹೈಕೋರ್ಟ್​​ ಸ್ಥಳೀಯ ಭಾಷೆಗೆ ಒತ್ತು ನೀಡಲು ಆರಂಭಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಲಯಾಳಂನಲ್ಲಿ ಹೈಕೋರ್ಟ್ ತೀರ್ಪು ಪ್ರಕಟಿಸಿತ್ತು. ಇದರ ನಂತರ ಇದೀಗ ತೆಲಂಗಾಣ ಹೈಕೋರ್ಟ್ ಸಹ ಇಂತಹದ್ದೊಂದು ಮೇಲ್ಪಂಕ್ತಿ ಹಾಕಿದೆ. ಈ ಮೂಲಕ ಕೇರಳದ ನಂತರ ಸ್ಥಳೀಯ ಭಾಷೆಗಳಲ್ಲಿ ತೀರ್ಪು ನೀಡಿರುವುದು ತೆಲಂಗಾಣ ಹೈಕೋರ್ಟ್ ಮಾತ್ರ.

ತೆಲುಗು ಭಾಷೆಯ ಎರಡು ರಾಜ್ಯಗಳಲ್ಲಿ ಒಂದೆರಡು ಕೆಳ ಹಂತದ ನ್ಯಾಯಾಲಯಗಳನ್ನು ಹೊರತುಪಡಿಸಿ ತೆಲುಗಿನಲ್ಲಿ ತೀರ್ಪು ನೀಡಿದ್ದೇ ಅಪರೂಪ.

ಈಗ ಹೈಕೋರ್ಟ್​ ನ್ಯಾಯಮೂರ್ತಿ ಪಿ.ನವೀನ್ ರಾವ್ ಮತ್ತು ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರನ್ನೊಳಗೊಂಡ ಪೀಠವು ತೆಲುಗಿನಲ್ಲಿ ತೀರ್ಪು ನೀಡುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಜೊತೆಗೆ ತೀರ್ಪಿನ ಕೊನೆಯಲ್ಲಿ ಕಕ್ಷಿದಾರರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತೆಲುಗಿನಲ್ಲಿ ಪ್ರಕಟಿಸಲಾಗಿದೆ ಎಂದು ಪೀಠ ಹೇಳಿದೆ.
.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ನವೀನ್ ರಾವ್ ಮತ್ತು ನಾಗೇಶ್ ಭೀಮಪಾಕ ಕೆಳ ಹಂತದ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಚಂದ್ರಾರೆಡ್ಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಕೆಳ ನ್ಯಾಯಾಲಯ ಉಯಿಲಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಲ್ಲದೆ ಅದಕ್ಕೆ ಸ್ಪಷ್ಟ ಕಾರಣಗಳನ್ನೂ ಹೇಳಿದೆ ಎಂದು ತೆಲುಗಿನಲ್ಲಿ 41 ಪುಟಗಳ ತೀರ್ಪು ಪ್ರಕಟಿಸಿದೆ.

ಸಿಕಂದರಾಬಾದ್‌ನ ವೀರಾರೆಡ್ಡಿ ಎಂಬುವವರ ಪುತ್ರರಾದ ಚಂದ್ರಾರೆಡ್ಡಿ ಮತ್ತು ಮುತ್ಯಂ ರೆಡ್ಡಿ ನಡುವಿನ ಭೂ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಮಾಚಬೊಳ್ಳಾರಂನಲ್ಲಿ ವೀರಾರೆಡ್ಡಿ ಹೆಸರಲಿದ್ದ 13 ಎಕರೆ ಭೂಮಿಯನ್ನು 1974ರಲ್ಲಿ ಇಬ್ಬರು ಸಹೋದರರು ಮತ್ತು ತಾಯಿಗೆ ಹಂಚಲಾಗಿತ್ತು. ಚಂದ್ರಾರೆಡ್ಡಿಗೆ 5 ಎಕರೆ, ಮುತ್ಯಂ ರೆಡ್ಡಿಗೆ 4 ಎಕರೆ ಹಾಗೂ ತಾಯಿಗೆ 4.08 ಎಕರೆ ಭೂಮಿ ಹಂಚಿಕೆ ಮಾಡಲಾಗಿತ್ತು. ತಾಯಿ ತೀರಿಕೊಂಡ ನಂತರ ಅವರಿಗೆ ಸೇರಿದ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ತನ್ನ ಪಾಲಿನ ಆಸ್ತಿ ಬಗ್ಗೆ ತಾಯಿ ಬರೆದ ಉಯಿಲಿನಲ್ಲಿ ಅನುಮಾನಗಳಿವೆ. ಈ ಸಂಪೂರ್ಣ ಜಾಮೀನು ನನಗೆ ಸೇರಿದ್ದು ಎಂದು ಚಂದ್ರಾರೆಡ್ಡಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ನ್ಯಾಯಾಲಯವು ಉಯಿಲನ್ನು ಅಸಿಂಧುಗೊಳಿಸಿ ಇಬ್ಬರು ಮಕ್ಕಳಿಗೆ ಸಮಾನ ಹಂಚಿಕೆ ಮಾಡಿತ್ತು. ಪ್ರಶ್ನಿಸಿ ಚಂದ್ರಾರೆಡ್ಡಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು
ನ್ಯಾಯಾಲಯದ ಅಧಿಕೃತ ಪ್ರಕ್ರಿಯೆಗಳಿಗಾಗಿ ಇಂಗ್ಲಿಷ್​ನಲ್ಲಿ ತೀರ್ಪು ಕೂಡ ನೀಡಲಾಗಿದೆ. ತೆಲುಗಿನಲ್ಲಿ ಅನುಮಾನಗಳಿದ್ದರೆ ಇಂಗ್ಲಿಷ್‌ನಲ್ಲಿರುವ ತೀರ್ಪನ್ನು ಗಣನೆಗೆ ತೆಗೆದುಕೊಂಡು ಅವುಗಳನ್ನು ಪರಿಹರಿಸಿಕೊಳ್ಳಬಹುದು ಎಂದೂ ನ್ಯಾಯ ಪೀಠ ಸ್ಪಷ್ಟಪಡಿಸಿದೆ.