ಈ ಬೆಕ್ಕಣ್ಣ ಈಗ ಮುಂಬೈ ಮೆಟ್ರೋದ ‘ಅಧಿಕಾರಿ..! ಜನಗಳ ಪ್ರೀತಿಯಿಂದಲೇ ಉನ್ನತ ಹುದ್ದೆ ಗಿಟ್ಟಿಸಿಕೊಂಡ ಮುದ್ದು ಬೆಕ್ಕು!

ಮುಂಬೈ: ಮೆಟ್ರೋ ನಿಲ್ದಾಣ ಎಂದರೆ ಪ್ರಯಾಣಿಕರ ಓಡಾಟ, ಸಿಬ್ಬಂದಿಯ ಕರ್ತವ್ಯ ಹಾಗೂ ರೈಲುಗಳ ಸಂಚಾರ. ಆದರೆ, ಮುಂಬೈನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಇವೆಲ್ಲದರ ನಡುವೆ ಪ್ರತಿದಿನ ಕಾಣಿಸಿಕೊಳ್ಳುವ ಮುದ್ದು ಬೆಕ್ಕೊಂದು ಇದೀಗ ಭಾರಿ ಸುದ್ದಿಯಾಗಿದೆ!

ನಿಲ್ದಾಣದ ಪ್ರವೇಶದ್ವಾರದ ಬಳಿ ಆರಾಮವಾಗಿ ಕುಳಿತುಕೊಳ್ಳುವ ಈ ಬೆಕ್ಕು ಪ್ರಯಾಣಿಕರಿಗೂ ಚಿರಪರಿಚಿತ. ಕೆಲವೊಮ್ಮೆ ಅಲ್ಲೇ ನಿದ್ರಿಸುತ್ತಾ, ಕೆಲವೊಮ್ಮೆ ಪ್ರಯಾಣಿಕರತ್ತ ನೋಡುತ್ತಾ ‘ಕರ್ತವ್ಯ’ ನಿರ್ವಹಿಸುವಂತೆ ಕಾಣಿಸಿಕೊಳ್ಳುತ್ತದೆ.

ಈ ಬೆಕ್ಕಿನ ಫೋಟೋವನ್ನು ಸಂದೇಶ್ ಸಾಮಂತ್ ಎಂಬ ಪ್ರಯಾಣಿಕ ‘ಎಕ್ಸ್‌’ನಲ್ಲಿ ಹಂಚಿಕೊಂಡು, “ಸಂಬಳವಿಲ್ಲದೆ ಉಚಿತ ಸೇವೆ ನೀಡುತ್ತಿರುವ ಈ ಬೆಕ್ಕಿಗೆ ಯಾವುದಾದರೂ ಅಧಿಕೃತ ಹುದ್ದೆ ನೀಡಿ” ಎಂದು ಮುಂಬೈ ಮೆಟ್ರೋ ಸಂಸ್ಥೆಗೆ ತಮಾಷೆಯಾಗಿ ಮನವಿ ಮಾಡಿದ್ದರು.

ಪ್ರಯಾಣಿಕನ ಮನವಿಗೆ ಮೆಟ್ರೋ ಸಂಸ್ಥೆಯೂ ಅಷ್ಟೇ ಮಜವಾದ ಉತ್ತರ ನೀಡಿದೆ. ಬೆಕ್ಕಿನ ಫೋಟೋ ಹಂಚಿಕೊಂಡಿರುವ ಸಂಸ್ಥೆ, ಅದಕ್ಕೆ ‘ಚೀಫ್ ಫೆಲೈನ್ ಆಫೀಸರ್’ (CFO) ಎಂಬ ಹುದ್ದೆ ನೀಡಿರುವುದಾಗಿ ತಮಾಷೆ ಮಾಡಿದೆ.

ಇಷ್ಟೇ ಅಲ್ಲ, ಈ ‘ಅಧಿಕಾರಿ’ಯ ಕೆಲಸವನ್ನೂ ಸಂಸ್ಥೆ ವಿವರಿಸಿದೆ. ನಿಲ್ದಾಣವನ್ನು ಪರಿಶೀಲಿಸುವುದು, ಪ್ರಯಾಣಿಕರ ಚಲನವಲನದ ಮೇಲೆ ನಿಗಾ ಇಡುವುದು ಹಾಗೂ ಪ್ರವೇಶದ್ವಾರದಲ್ಲಿ ಕುಳಿತು ಪ್ರಯಾಣಿಕರನ್ನು ಸ್ವಾಗತಿಸುವುದು ಇದರ ಪ್ರಮುಖ ಕರ್ತವ್ಯಗಳಂತೆ! ಮೆಟ್ರೋ ಸಂಸ್ಥೆಯ ಈ ತಮಾಷೆಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಮುಖ್ಯ ಇಲಿ ಹಿಡಿಯುವ ಅಧಿಕಾರಿ” ಎಂದು ತಮಾಷೆ ಮಾಡಿದರೆ, ಇನ್ನು ಕೆಲವರು “ನಿಲ್ದಾಣಕ್ಕೆ ಬಂದಾಗಲೆಲ್ಲ ಈ ಬೆಕ್ಕನ್ನು ಹುಡುಕುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.

ಬೆಕ್ಕಿನ ಇಡಿಯೋ ನೋಡಲು ಈ ಲಿಂಕ್ ಕ್ಲಿಕ್ಕಿಸಿ https://www.instagram.com/reel/DcbeMLog6Y4/?utm_source=ig_web_copy_link&stkn=NTc4MTIwNjQ2YQ==