ಮೂರನೇ ಸವಾರನೂ ವಿಮೆಗೆ ಅರ್ಹ: ಹೈಕೋರ್ಟ್

ಬೆಂಗಳೂರು: ದ್ವಿಚಕ್ರ ವಾಹನದ ವಿಮೆಗೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೈಕ್‌ ಅಪಘಾತ ಸಂದರ್ಭದಲ್ಲಿ ಮೂವರು ಸವಾರಿ ಮಾಡುತ್ತಿದ್ದರೆ, ಮೂರನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಹೈಕೋರ್ಟ್ ಆದೇಶಿಸಿದೆ.

2011ರಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಮೂರನೇ ಸವಾರರಿಗೂ ವಿಮೆ ನೀಡಬೇಕು ಎಂದು ಮೋಟಾರು ವಾಹನ ನ್ಯಾಯಮಂಡಳಿ 2012ರಲ್ಲಿ ನೀಡಿದ್ದ ಆದೇಶವನ್ನು ವಿಮಾ ಕಂಪನಿ ಪ್ರಶ್ನಿಸಿತ್ತು. ಮೂರನೇ ಸವಾರನ ಕುಟುಂಬಕ್ಕೆ ₹8.10 ಲಕ್ಷ ಪರಿಹಾರ ನೀಡಲು ತಿಳಿಸಿತ್ತು.

ಬೈಕ್‌ನಲ್ಲಿ ಮೂವರು ಪ್ರಯಾಣಿಸುವ ಮೂಲಕ ವಿಮಾ ಷರತ್ತು ಉಲ್ಲಂಘಿಸಲಾಗಿದೆ. ಬೈಕ್ ಸವಾರ ಸರಿಯಾದ ಚಾಲನಾ ಪರವಾನಗಿಯನ್ನೂ ಹೊಂದಿಲ್ಲ ಎಂದು ಕಂಪನಿ ಆರೋಪಿಸಿತ್ತು.
ಮೊಹಮದ್ ಸಿದ್ದೀಕ್ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನಡುವಿನ ಪ್ರಕರಣದಲ್ಲಿ ‘ಮೂವರು ಪ್ರಯಾಣ ಮಾಡುತ್ತಿದ್ದರೂ ವಿಮಾ ಪಡೆಯಬಹುದು’ ಎಂಬ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಹಕ್ಕುದಾರರು ಉಲ್ಲೇಖಿಸಿದ್ದರು.

ವಿಮಾ ಕಂಪನಿ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರಿದ್ದ ಪೀಠ, ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ವ್ಯಕ್ತಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ವಿಮೆ ಪಡೆಯುವ ಹಕ್ಕು ನಿರಾಕರಿಸಲು ಆಗುವುದಿಲ್ಲ ಎಂದು ತಿಳಿಸಿದೆ.