ಉಡುಪಿ: ದೇವಾಡಿಗ ಸಮಾಜದ ಕುಲದೇವಿ ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ತೃತೀಯ ವಾರ್ಷಿಕ ವರ್ಧಂತ್ಯುತ್ಸವ ಫೆಬ್ರವರಿ 14ರಿಂದ 19ರ ವರೆಗೆ ದೇಗುಲದಲ್ಲಿ ನಡೆಯಲಿದೆ ಎಂದು ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ನಮ್ಮ ನಡಿಗೆ ಅಮ್ಮ ನೆಡೆಗೆ:
ದೇವಾಡಿಗ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಕಲ ಸಂಕಷ್ಟ, ಗ್ರಹಚಾರ ದೋಷ ನಿವಾರಣೆಗಾಗಿ ಫೆ. 14ರಂದು ಬೆಳಿಗ್ಗೆ 5.45ಕ್ಕೆ ಉಡುಪಿ ದೇವಾಡಿಗರ ಸೇವಾ ಸಂಘದಿಂದ ನಾಲ್ಕನೇ ವರ್ಷದ ‘ನಮ್ಮ ನಡಿಗೆ ಅಮ್ಮ ನೆಡೆಗೆ’ ಪಾದಯಾತ್ರೆ ಆರಂಭಗೊಳ್ಳಲಿದೆ. ಪಾದಯಾತ್ರೆಯು ಅಂಬಾಗಿಲು ವೃತ್ತ, ಕಲ್ಯಾಣಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಬ್ರಹ್ಮಾವರ ಮಾರ್ಗವಾಗಿ ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ ಎಂದರು.
ಹಸಿರು ಹೊರೆಕಾಣಿಕೆ:
ಫೆ. 17ರಂದು ಮಧ್ಯಾಹ್ನ 3.30ಕ್ಕೆ ವಿವಿಧ ದೇವಾಡಿಗ ಸಂಘಗಳ ಸದಸ್ಯರು ಮತ್ತು ಸಮಾಜ ಬಾಂಧವರ ವೈಭವದ ಹಸಿರು ಹೊರೆಕಾಣಿಕೆ ಮೆರಣಿಗೆಯು ಬಾರ್ಕೂರು ಸೇತುವೆಯಿಂದ ಆರಂಭಗೊಂಡು ಕಾಲ್ನಡಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪಲಿದೆ ಎಂದು ತಿಳಿಸಿದರು.
ಫೆ. 18ರಂದು ಸುರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ದೇವಾಡಿಗ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಲಿದೆ. ಫೆ. 19ರಂದು ಬೆಳಿಗ್ಗೆ 9ಗಂಟೆಗೆ ಸಾಮೂಹಿಕ ಚಂಡಿಕಾಯಾಗ, 9.30ಕ್ಕೆ ವಧು- ವರರ ನೋಂದಣಿ ಮತ್ತು ವಧುವರಾನೇಷ್ವಣೆ, ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ, ಮಧ್ಯಾಹ್ನ 2.30ಕ್ಕೆ ಪಂಚಾಯತ್ ಚುನಾವಣೆಯಲ್ಲಿ ದೇವಾಡಿಗ ಸಮುದಾಯದಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಫೆ. 25ಕ್ಕೆ ಬ್ರಹ್ಮಕುಂಭಾಭಿಷೇಕ:
ಫೆ. 25ಕ್ಕೆ ದೇವಳದಲ್ಲಿ ಬ್ರಹ್ಮಕುಂಭಾಭಿಷೇಕ, ಪ್ರಧಾನ ಹೋಮ, ಪೂರ್ಣಾಹುತಿ, ಮಹಾಪೂಜೆ ನೆರವೇರಲಿದೆ. ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮತ್ತು 7.30ಕ್ಕೆ ಮಹಾಪೂಜೆ ನಡೆಯಲಿದೆ ಎಂದರು.
ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ನ ಉಪಾಧ್ಯಕ್ಷ ಜನಾರ್ದನ ದೇವಾಡಿಗ ಬಿ., ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಗೌರವ ಕಾರ್ಯದರ್ಶಿ ಗಣೇಶ ದೇವಾಡಿಗ, ಆಡಳಿತಾಧಿಕಾರಿ ಜನಾರ್ದನ ಪಡುಪಣಂಬೂರು, ಉಡುಪಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ರತ್ನಾಕರ ದೇವಾಡಿಗ ಉಪಸ್ಥಿತರಿದ್ದರು.