ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಬಳಸಲು ಯಾವ ಅಡ್ಡಿಯೂ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳ ಬಳಕೆಯ ಕುರಿತು ಸಿಎಂ ಸಿದ್ದರಾಮಯ್ಯ ಮಹತ್ವದ ಸ್ಪಷ್ಟನೆ ನೀಡಿದ್ದು, ಪ್ರಾಥಮಿಕ ಶಾಲೆಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಅನುಸರಿಸುತ್ತಿರುವ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಮೈಸೂರಿನ ನಿವಾಸದಲ್ಲಿ ಮೇ 14ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಸೇರಿದಂತೆ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿರುವ ಧಾರ್ಮಿಕ ಸಂಪ್ರದಾಯಗಳಿಗೆ ಯಾವುದೇ ತಡೆ ಇಲ್ಲ. ಆದರೆ ಶಾಲಾ ಆವರಣದಲ್ಲಿ ಹೊಸದಾಗಿ ಯಾವುದೇ ಧಾರ್ಮಿಕ ಆಚರಣೆಗಳು ಅಥವಾ ಸಂಕೇತಗಳನ್ನು ಹುಟ್ಟುಹಾಕುವಂತಿಲ್ಲ” ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿ ಎತ್ತಿರುವ ಧಾರ್ಮಿಕ ಸಂಕೇತಗಳ ವಿವಾದದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಶಿಕ್ಷಣ ಸಂಸ್ಥೆಗಳಲ್ಲಿ ಅನಗತ್ಯ ವಿವಾದ ಸೃಷ್ಟಿಸಬಾರದು ಎಂಬ ಸಂದೇಶವನ್ನೂ ಪರೋಕ್ಷವಾಗಿ ನೀಡಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನೀಟ್ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಅಕ್ರಮಗಳಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ” ಎಂದು ಆರೋಪಿಸಿದರು.