ಕಾಂಗ್ರೆಸ್‍ನ ಮೃದು ಹಿಂದುತ್ವದಲ್ಲಿ ಗೋಹತ್ಯೆಗೆ ಅವಕಾಶವಿದೆಯೆ?: ಕುಯಿಲಾಡಿ ಪ್ರಶ್ನೆ

ಉಡುಪಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರಗೊಳಿಸುವ ಮೂಲಕ ಕೋಟ್ಯಾಂತರ ಹಿಂದೂಗಳ‌ ಭಾವನೆಯನ್ನು ಗೌರವಿಸಿದೆ. ಆದರೆ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ದೂರಿದ್ದಾರೆ‌.

ಕಾಂಗ್ರೆಸ್ ನಿರಂತರವಾಗಿ ಗೋಕಳ್ಳರನ್ನು ಪೋಷಿಸುತ್ತಾ ಬಂದಿದೆ. ಅದನ್ನು‌ ಮರೆಮಾಚುವ ಉದ್ದೇಶದಿಂದ ಕಾಂಗ್ರೆಸ್ ಅಳವಡಿಸಿಕೊಂಡಿರುವ ಮೃದು ಹಿಂದುತ್ವದಲ್ಲಿ ಗೋಹತ್ಯೆಗೆ ಅವಕಾಶವಿದೆಯೇ?. ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತೀಯ ಸನಾತನ ಸಂಸ್ಕ್ರತಿಯಲ್ಲಿ ಗೋಮಾತೆಗೆ ಪೂಜ್ಯನೀಯ ಸ್ಥಾನವಿದೆ. ಆದಾಗ್ಯೂ ದನದ ಹಟ್ಟಿಯಿಂದ ಹಗಲಿರುಳೆನ್ನದೆ ಗೋವುಗಳನ್ನು ಕದ್ದು ಸಾಗಟ ಮಾಡಿ ಗೋಹತ್ಯೆಯನ್ನು ಅವ್ಯಾಹತವಾಗಿ ನಡೆಸುತ್ತಿದೆ. ಆದರೆ ಇದರ ವಿರುದ್ಧ ಕಾಂಗ್ರೆಸ್‍ ತುಟಿ ಬಿಚ್ಚುತ್ತಿಲ್ಲ. ಗೋಹತ್ಯೆ ಮಸೂದೆ ಜಾರಿ ಪ್ರಕ್ರಿಯೆಯಿಂದ ಜನಮಾನಸದಲ್ಲಿ ಭರವಸೆ ಮೂಡಿಸಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಅವಕಾಶವಾದಿ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊಸಳೆ ಕಣ್ಣೀರನ್ನು ರಾಜ್ಯದ ಜನತೆ ಸರಿಯಾಗಿಯೇ ಅರ್ಥೈಸಿಕೊಂಡಿದ್ದಾರೆ. ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸುವ ಮೂಲಕ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್‍ನ ಓಲೈಕೆ ರಾಜಕಾರಣದ ನಿಜ ಬಣ್ಣ ಬಯಲಾಗಿದೆ. ಆದರೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮೂಲಕ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವುದು ಶತಸಿದ್ಧ. ಒಂದೆಡೆ ನಾಟಕೀಯ ಹಿಂದೂ ಜಪ, ಇನ್ನೊಂದೆಡೆ ಗೋಹತ್ಯೆ ನಿಷೇಧ ಮಸೂದೆಗೆ ಪ್ರತಿರೋಧ ಒಡ್ಡುತ್ತಿರುವ ಕಾಂಗ್ರೆಸ್‍ಗೆ ಮುಂಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.